ಬೆಂಗಳೂರು : ಕರ್ನಾಟಕದಿಂದ ಸಂಗ್ರಹವಾಗುವ 1 ರೂಪಾಯಿ ತೆರಿಗೆಯಲ್ಲಿ 15 ಪೈಸೆ ಮಾತ್ರ ವಾಪಸು ಬರುತ್ತಿದೆ. ಉತ್ತರ ಪ್ರದೇಶಕ್ಕೆ 1 ರೂಪಾಯಿಗೆ ₹2.73ರಷ್ಟು ಹಣ ವಾಪಸು ಹೋಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ಧಾಳಿ ನಡೆಸಿದ್ದಾರೆ.
ಸಂಪನ್ಮೂಲ ಹಂಚಿಕೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ತಮ್ಮ ಅಂಕಣದಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಜಿಎಸ್ಟಿ, ಎನ್ಡಿಆರ್ಎಫ್, 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯ, ಕೇಂದ್ರದ ಕಡೆಗಣನೆ ಅಂಕಿ ಅಂಶಗಳ ಸಮೇತ ರಾಜ್ಯದ ಜನತೆಯ ಮುಂದಿಟ್ಟಿದ್ದಾರೆ ಎಂದಿದ್ದಾರೆ.
2021-22ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ, ಕರ್ನಾಟಕ ರಾಜ್ಯವೊಂದರಿಂದಲೇ ಸುಮಾರು ₹4.75 ಲಕ್ಷ ಕೋಟಿಯನ್ನು ತೆರಿಗೆ ಮೂಲಕ ಸಂಗ್ರಹಿಸಿದೆ. ಇದರಲ್ಲಿ ರಾಜ್ಯಕ್ಕೆ ತನ್ನ ಪಾಲಿನ ರೂಪದಲ್ಲಿ ಸಿಕ್ಕಿರುವುದು ₹50,000 ಕೋಟಿ ಮಾತ್ರ. ಒಂದು ಅಂದಾಜಿನ ಪ್ರಕಾರ ಕರ್ನಾಟಕದಿಂದ ಸಂಗ್ರಹವಾಗುವ 1 ರೂಪಾಯಿ ತೆರಿಗೆಯಲ್ಲಿ 15 ಪೈಸೆ ಮಾತ್ರ ವಾಪಸು ಬರುತ್ತಿದೆ. ಉತ್ತರ ಪ್ರದೇಶಕ್ಕೆ 1 ರೂಪಾಯಿಗೆ ₹2.73ರಷ್ಟು ಹಣ ವಾಪಸು ಹೋಗುತ್ತಿದೆ ಎಂದಿದ್ದಾರೆ.
ಇನ್ನೊಂದೆಡೆ ಈ ವರ್ಷ ರಾಜ್ಯದ 216 ತಾಲ್ಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಅಂದಾಜು ₹33,770 ಕೋಟಿಯಷ್ಟು ನಷ್ಟವಾಗಿದೆ. ಎನ್ಡಿಆರ್ಎಫ್ನಿಂದ ಪರಿಹಾರಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳು, ಕೃಷಿ ಸಚಿವರು ಖುದ್ದಾಗಿ ಹೋಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟರೂ ಇಲ್ಲಿಯವರೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ.ಕೇಂದ್ರ ಬಿಜೆಪಿ ಸರ್ಕಾರದ ಅನ್ಯಾಯಗಳ ಬಗ್ಗೆ ಕನ್ನಡಿಗರು ಜಾಗೃತರಾಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ಧಾಳಿ ನಡೆಸಿದ್ದಾರೆ.