ನವದೆಹಲಿ: ಏಳೂವರೆ ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ(ಐಎಎಫ್) ವಿಮಾನದ ಅವಶೇಷಗಳು ಬಂಗಾಳಕೊಲ್ಲಿಯಲ್ಲಿ ಸುಮಾರು 3.4 ಕಿ.ಮೀ ಆಳದಲ್ಲಿ ಪತ್ತೆಯಾಗಿವೆ.
29 ಸಿಬ್ಬಂದಿಯನ್ನು ಹೊತ್ತಿದ್ದ IAF ನ An-32 ಸಾರಿಗೆ ವಿಮಾನವು 2016 ರಲ್ಲಿ ನಾಪತ್ತೆಯಾಗಿತ್ತು. ಪತನಗೊಂಡ ವಿಮಾನದ ಅವಶೇಷಗಳು ಚೆನ್ನೈ ಕರಾವಳಿಯಲ್ಲಿ ಪತ್ತೆಯಾಗಿವೆ.
ಕಾಣೆಯಾದ ವಿಮಾನದ ಅವಶೇಷಗಳಿಗಾಗಿ ಆಳ ಸಮುದ್ರದ ಪರಿಶೋಧನೆ
ಆಳ ಸಮುದ್ರದ ಅನ್ವೇಷಣೆಗಾಗಿ ಬಂಗಾಳಕೊಲ್ಲಿಯಲ್ಲಿ ಕಾಣೆಯಾದ An-32 ವಿಮಾನದ ಕೊನೆಯ ತಿಳಿದಿರುವ ಸ್ಥಳದಲ್ಲಿ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯು ಸ್ವಾಯತ್ತ ನೀರೊಳಗಿನ ವಾಹನವನ್ನು(AUV) ನಿಯೋಜಿಸಿದೆ. ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ, ಚೆನ್ನೈ ಕರಾವಳಿಯಿಂದ 310 ಕಿಮೀ ದೂರದಲ್ಲಿ ಅವಶೇಷಗಳನ್ನು ಪತ್ತೆ ಮಾಡಿದೆ. ನಂತರ, ಅವಶೇಷಗಳ ಚಿತ್ರಗಳನ್ನು ರಕ್ಷಣಾ ಸಚಿವಾಲಯದೊಂದಿಗೆ ಹಂಚಿಕೊಂಡಿದೆ. ಫೋಟೋಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಅವಶೇಷಗಳು ಎಎನ್-32 ವಿಮಾನದ್ದು ಎಂದು ದೃಢಪಟ್ಟಿದೆ.
ವಿಮಾನ ನಾಪತ್ತೆಯಾಗಿದ್ದು ಯಾವಾಗ?
ಜುಲೈ 22, 2016 ರಂದು ಕೆ-2743 ನೋಂದಣಿ ಸಂಖ್ಯೆಯ IAF ನ An-32 ವಿಮಾನವು ಬಂಗಾಳ ಕೊಲ್ಲಿಯಲ್ಲಿ ನಾಪತ್ತೆಯಾಗಿತ್ತು. ವಿಮಾನವು ಚೆನ್ನೈನ ತಂಬರಾನ್ ವಾಯುನೆಲೆಯಿಂದ ಬೆಳಿಗ್ಗೆ 8:30 ಕ್ಕೆ ಟೇಕ್ ಆಫ್ ಆಗಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಪೋರ್ಟ್ ಬ್ಲೇರ್‌ಗೆ ತಲುಪಬೇಕಿತ್ತು. ಸುಮಾರು 11:45 am ನಂತರ ಅದು 23,000 ಅಡಿಗಳ ಎತ್ತರದಲ್ಲಿ ಸಂಪರ್ಕ ಕಳೆದುಕೊಂಡಿತು. ಚೆನ್ನೈ ಕರಾವಳಿಯಿಂದ 280 ಕಿಮೀ ದೂರದಲ್ಲಿ 9:12am ಸುಮಾರಿಗೆ ರಾಡಾರ್‌ನಿಂದ ಕಣ್ಮರೆಯಾಯಿತು.
ವಿಮಾನ ನಾಪತ್ತೆಯಾದಾಗ ಕಾರ್ಯಾಚರಣೆಯಲ್ಲಿತ್ತು. ಎಂಟು ನಾಗರಿಕರು ಸೇರಿದಂತೆ ಒಟ್ಟು 29 ಸಿಬ್ಬಂದಿ ವಿಮಾನದಲ್ಲಿದ್ದರು. ವಿಮಾನವು ಕಣ್ಮರೆಯಾದ ನಂತರ, ವಿಮಾನ ಮತ್ತು ಕಾಣೆಯಾದ ಸಿಬ್ಬಂದಿಗಳ ಅವಶೇಷಗಳನ್ನು ಕಂಡುಹಿಡಿಯಲು ಹಲವಾರು ವಿಮಾನಗಳು ಮತ್ತು ಹಡಗುಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸಿದರೂ ಪತ್ತೆ ಮಾಡಲು ಸಾಧ್ಯವಾಗಲಿಲ್ಲ.