ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಯಾರದ್ದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಜಾತಿಗೊಂದು ಡಿಸಿಎಂ ಸ್ಥಾನ ಕೊಟ್ಟು ಬಿಡಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನವರು ತಮ್ಮಲ್ಲಿರುವ 30-35 ಶಾಸಕರಿಗೂ ಡಿಸಿಎಂ ಸ್ಥಾನ ನೀಡಲಿ. ಆಗ ಸಮಸ್ಯೆಯೂ ಇರಲ್ಲ, ಗೊಂದಲವೂ ಇರಲ್ಲ ಎಂದು ಲೇವಡಿ ಮಾಡಿದ್ದಾರೆ.
ಗ್ಯಾರಂಟಿ ಯೋಜನೆ ನೋಡಿಕೊಳ್ಳುವುದಕ್ಕೆ ಅಂತ ಒಬ್ಬ ಅಧ್ಯಕ್ಷನನ್ನು ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 16 ಕೋಟಿ ಹಣ ಬೇಕಂತೆ. ಗ್ಯಾರಂಟಿ ಯೋಜನೆಗೆ ಐವರು ಉಪಾಧ್ಯಕ್ಷರು ಯಾಕೆ ಬೇಕು? ಯಾರದ್ದೋ ದುಡ್ಡಲ್ಲಿ ಕಾಂಗ್ರೆಸ್ ನವರು ಜಾತ್ರೆ ಮಾಡುತ್ತಿದ್ದಾರೆ. ಅವರ ಸ್ಥಿತಿ ನನಗೆ ಅರ್ಥವಾಗಿದೆ. ಚುನಾವಣೆ ಫಲಿತಾಂಶದ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.