ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಲೋಕಾಯುಕ್ತ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಆರು ಮಂದಿ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದು, ಆದಾಯ ಮೀರಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ ಆರೋಪದ ಮೇಲೆ 35 ಕಡೆ ದಾಳಿ ನಡೆಸಿ ಒಟ್ಟು 51.13 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಹಚ್ಚಲಾಗಿದೆ.
ದಾಳಿಯ ವೇಳೆ ರಾಮನಗರ ಜಿಲ್ಲೆ ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ಸುರೇಶ್ ಬರೋಬ್ಬರಿ 25 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಅವರ ಮನೆಯಲ್ಲಿ ವಿದೇಶಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಸುರೇಶ್ ಮನೆಯಲ್ಲಿದ್ದ ಕೋಟ್ಯಂತರ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಅವರ ಬಳಿ 25 ಕೋಟಿ ಮೌಲ್ಯದ ಆಸ್ತಿ ಇದೆ. ಸಂಬಂಧಿಕರ ಹೆಸರಿನಲ್ಲಿಯೂ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿರುವ ಶಂಕೆ ವ್ಯಕ್ತವಾಗಿದೆ. ಸುರೇಶ್ ಅವರಿಗೆ ಸೇರಿದ ಆರು ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, 16 ನಿವೇಶನ, ಒಂದು ವಾಸದ ಮನೆ, 7.6 ಎಕರೆ ಜಮೀನು, ದುಬಾರಿ ಕಾರುಗಳು, ಕೆಜಿಗಟ್ಟಲೆ ಬಂಗಾರ 2 ಕೋಟಿ ರೂ. ನಗದು, ವಿದೇಶಿ ಮದ್ಯದ ಬಾಟಲಿಗಳು ಸೇರಿ ಸುಮಾರು 25.58 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಪತ್ತೆಯಾಗಿದೆ.