ದೊಡ್ಡಬಳ್ಳಾಪುರ: ಅನ್ನಭಾಗ್ಯ ಯೋಜನೆ ಅಡಿ ಘೋಷಣೆ ಮಾಡಿದಂತೆ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಿಸಲು ಎಲ್ಲಿಯೂ ಅಕ್ಕಿ ಸಿಗುತ್ತಿಲ್ಲ. ಸದ್ಯಕ್ಕೆ ಹೆಚ್ಚುವರಿ ಅಕ್ಕಿ ಬದಲಿಗೆ ಹಣ ಪಾವತಿಸುವುದನ್ನು ಮುಂದುವರೆಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ದೊಡ್ಡಬಳ್ಳಾಪುರದ ಗೂಳ್ಯ ಗ್ರಾಮದಲ್ಲಿ ಮಾತನಾಡಿದ ಅವರು, ಅಕ್ಕಿ ಖರೀದಿಗಾಗಿ ಆಂಧ್ರಪ್ರದೇಶದೊಂದಿಗೆ ಮಾತುಕತೆ ನಡೆಸಲಾಗಿದ್ದು, ಅಲ್ಲಿಯೂ ಅಕ್ಕಿಯ ಕೊರತೆ ಇದೆ. ಮಾತುಕತೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಹೆಚ್ಚುವರಿ ಅಕ್ಕಿ ವಿತರಿಸುವುದು ಕಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.
ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತಿದೆ. ಮುಂಗಾರು ಕೊರತೆಯಾಗಿ ಬರ ಪರಿಸ್ಥಿತಿ ಇರುವುದರಿಂದರಿಂದ ಸಾಕಷ್ಟು ಜನ ಅಕ್ಕಿ ನೀಡುವಂತೆ ಕೇಳುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಹೆಚ್ಚುವರಿ ಅಕ್ಕಿ ವಿತರಣೆ ಕಷ್ಟ ಸಾಧ್ಯವಾಗಿದೆ. ಹೆಚ್ಚುವರಿ ಅಕ್ಕಿ ವಿತರಿಸಲು ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಹಣ ಕೊಡುವುದನ್ನು ಮುಂದುವರೆಸಲಾಗುವುದು ಎಂದು ಹೇಳಿದ್ದಾರೆ.