ಹುಬ್ಬಳ್ಳಿ: ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯದಲ್ಲಿ ಅಘೋಷಿತ ಬಂದ್ ವಾತಾವರಣವಿದೆ. ಸಿಎಂ ಹಾಗೂ ಸಚಿವರ ಭಾಷೆ ವ್ಯಕ್ತಿಯ ಸ್ವತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ಕೇಸ್ ಹಾಕುತ್ತಿದ್ದಾರೆ. ಕರ್ನಾಟಕದಲ್ಲಿ ಭಯ ಹುಟ್ಟಿಸುವ ಪ್ರಯತ್ನವಾಗುತ್ತಿದೆ. ಶ್ರೀಕಾಂತ್ ಪೂಜಾರಿ ವಿರುದ್ಧ ಯಾವ ಕೇಸ್ ಇರಲಿಲ್ಲ. ಆದರೂ ಜೈಲಿಗೆ ಕಳುಹಿಸಿದ್ದರು. ಕಾಂಗ್ರೆಸ್ ನಾಯಕರಿಗೆ 7 ತಿಂಗಳಲ್ಲೇ ಅಧಿಕಾರದ ಮದ ಏರಿದೆ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ನಾಳೆ ಬಿಜೆಪಿ ಚಿಂತನ ಮಂಥನ ಸಭೆ ನಡೆಯಲಿದ್ದು, ಮುಂದಿನ ಹೋರಾಟದ ಬಗ್ಗೆ ಚರ್ಚಿಸುತ್ತೇವೆ. ರಾಮ ಮಂದಿರ ಆಗಬಾರದು ಎಂಬುದು ಕಾಂಗ್ರೆಸ್ ಆಸೆಯಾಗಿತ್ತು. ಕಾಂಗ್ರೆಸ್ ಎಂಎಲ್ ಸಿ ಹರಿಪ್ರಸಾದ್ ಗೋಧ್ರಾ ಬಗ್ಗೆ ಮಾತನಾಡುತ್ತಿದ್ದಾರೆ. ಹರಿಪ್ರಸಾದ್ ಗೆ ಮಾಹಿತಿ ಇದ್ದರೆ ಯಾಕೆ ಕೊಡಲಿಲ್ಲ. ಅಕಸ್ಮಾತ್ ಏನಾದರೂ ಆದರೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಗುಡುಗಿದ್ದಾರೆ.