ಕಲಬುರಗಿ : ಕಲ್ಯಾಣ ಕರ್ನಾಟಕ ಅಭಿವೃದ್ದಿ ನಿಗಮದಿಂದ ಅರಣ್ಯ ಇಲಾಖೆಗೆ 30 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಅಭಿವೃದ್ದಿ ನಿಗಮದ ವತಿಯಿಂದ ಅರಣ್ಯ ಇಲಾಖೆಗೆ ₹ 30 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಈ ಅನುದಾನ ಬಳಸಿಕೊಳ್ಳಬೇಕು ಎಂದು ಸೂಚಿಸಿದೆ. ಇದಲ್ಲದೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಅರಣ್ಯ ಸಿಬ್ಬಂದಿಗಳು ಮಾನ್ಯ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿ ಎಂದು ತಿಳಿಸಿದರು.
ಪ್ರಕೃತಿಯ ಆಸ್ತಿಯನ್ನು ಕಾಪಾಡುವ ಅರಣ್ಯ ಸಿಬ್ಬಂದಿಗಳ ಕಾರ್ಯಕ್ಷಮತೆ, ದೇಶದ ಗಡಿ ಕಾಯುವ ಸೈನಿಕರ ಸೇವೆಗೆ ಸಮಾನವಾದುದು. ನೈಸರ್ಗಿಕ ವಿಕೋಪ, ವನ್ಯ ಜೀವಿಗಳ ನಡುವಿನ ಸಂಘರ್ಷ, ಅರಣ್ಯ ಚೋರರ ವಿರುದ್ದದ ಕಾರ್ಯಾಚರಣೆ ಸೇರಿದಂತೆ ಹಲವಾರು ಅಡೆತಡೆಗಳ ನಡುವೆ ಕೆಲಸ ಮಾಡುವ ಅರಣ್ಯ ಸಿಬ್ಬಂದಿಗಳ ಸೇವೆಯನ್ನು ಎಲ್ಲರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ನಾವು ವನ್ಯಜೀವಿಗಳ ಬಗ್ಗೆ ತೋರುವ ಕಾಳಜಿಯನ್ನು, ಅರಣ್ಯ ರಕ್ಷಕ ಸಿಬ್ಬಂದಿಗಳ ಮೇಲೆಯೂ ತೋರಿಸಬೇಕಿದೆ ಎಂದರು.
ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ನಿಲ್ಲಬೇಕು ಎನ್ನುವುದು ಎಲ್ಲರ ಆಗ್ರಹ. ಆದರೆ ಅರಣ್ಯ ರಕ್ಷಕರಿಗೆ ಸೂಕ್ತ ಸೌಕರ್ಯಗಳನ್ನು ನೀಡಿದಾಗ ಮಾತ್ರ ಸಂಘರ್ಷ ತಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಅಗತ್ಯ ಅನುದಾನ ಬಿಡುಗಡೆ ಮಾಡಲು ನಾವು ಬದ್ಧರಾಗಿದ್ದೇವೆ.
ಸುಮಾರು 2 ದಶಕಗಳ ನಂತರ ಕಲಬುರಗಿಯಲ್ಲಿ ಈ ಕ್ರೀಡಾ ಕೂಟ ನಡೆಯುತ್ತಿದ್ದು, ರಾಜ್ಯದ 13 ವಲಯಗಳಿಂದ 1200ಕ್ಕೂ ಹೆಚ್ಚು ಸ್ಪರ್ಧಿಗಳು 271 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ನಿರೂಪಿಸಿದ್ದು ಅವರೆಲ್ಲರಿಗೂ ಅಭಿನಂದನೆಗಳು ಎಂದರು.