ತಿರುಪತಿ : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ದೇಶಾದ್ಯಂತ ರಾಮನ ಜಪತಪ ನಡೆಯುತ್ತಿದೆ. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ 1 ಲಕ್ಷ ಶ್ರೀವಾರಿ ಲಡ್ಡು ಪ್ರಸಾದವನ್ನು ನೀಡಲಿದೆ.
ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸನಾತನ ಧರ್ಮವನ್ನು ಅನುಸರಿಸುವ ನಮ್ಮೆಲ್ಲರಿಗೂ ಇದು ಐತಿಹಾಸಿಕ ಕ್ಷಣವಾಗಿದೆ. ರಾಮ ಜನ್ಮ ಭೂಮಿ ಪೂಜೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನಮಗೆ ಹೆಮ್ಮೆಯ ವಿಷಯ” ಎಂದು ಅವರು ಹೇಳಿದರು.ಸನಾತನ ಹಿಂದೂ ಧರ್ಮದ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಫೆಬ್ರವರಿ 3 ರಿಂದ 5 ರವರೆಗೆ ತಿರುಮಲದಲ್ಲಿ ಪ್ರಮುಖ ಪುರೋಹಿತರು ಮತ್ತು ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಧಾರ್ಮಿಕ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಟಿಟಿಡಿ ಜನವರಿ 15 ರಂದು ತಿರುಪತಿಯಲ್ಲಿ ವಾರ್ಷಿಕ ಶ್ರೀ ಗೋದಾ ಕಲ್ಯಾಣಂ ಉತ್ಸವವನ್ನು ಆಚರಿಸಲು ಸಜ್ಜಾಗಿದೆ. ತಿರುಪತಿಯಲ್ಲಿ ಈ ತಿಂಗಳು ನಡೆಯಲಿರುವ ಇತರ ಹಬ್ಬಗಳಲ್ಲಿ ಜನವರಿ 16 ರಂದು ಶ್ರೀವಾರಿ ಪರುವೇತ ಉತ್ಸವಂ ಮತ್ತು ಕನುಮಾ ಹಬ್ಬದ ದಿನ ಸೇರಿವೆ.
ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.