ಬೆಂಗಳೂರು : 2022-23 ನೇ ಸಾಲಿನಲ್ಲಿ ಅನುಷ್ಟಾನಗೊಂಡಿರುವ ಕರ್ನಾಟಕ ಯುವನಿಧಿ ಯೋಜನೆ ಗಾಗಿ ಪದವಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಳ್ಳುವ ಕುರಿತಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ವಿಷಯಕ್ಕೆ ಸಂಬಂದಿಸಿದಂತೆ ಉಲ್ಲೇಖಿತ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪತ್ರದಲ್ಲಿ ಸೂಚಿಸಿರುವಂತೆ ಕರ್ನಾಟಕ ಸರ್ಕಾರವು “ಕರ್ನಾಟಕ ಯುವನಿಧಿ ಯೋಜನೆ” ಯನ್ನು ಅನುಷ್ಠಾನಗೊಳಿಸಿರುತ್ತದೆ. ಇದರನ್ವಯ 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ತರಗತಿಯಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.3000.00 (ಮೂರು ಸಾವಿರ ಮಾತ್ರ) ನಿರುದ್ಯೋಗ ಭತ್ಯೆಯನ್ನು ಸರ್ಕಾರವು ಅನುಷ್ಠಾನಗೊಳಿಸಿದೆ. ಯುವನಿಧಿ ಮೊತ್ತವನ್ನ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮೂಲಕ (ಡಿಬಿಟಿ) ವರ್ಗಾವಣೆ ಮಾಡಲಾಗುತ್ತದೆ.
ಸದರಿ ಯೋಜನೆಗೆ ಇಲಾಖೆ ವ್ಯಾಪ್ತಿಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಪ್ರಾಂಶುಪಾಲರು/ಪ್ಲೇಸ್ ಮೆಂಟ್ ಅಧಿಕಾರಿಗಳು/ಸಿಬ್ಬಂದಿಗಳು 2022-23 ನೇ ಸಾಲಿನಲ್ಲಿ ಪದವಿ ತರಗತಿ ತೇರ್ಗಡೆಯಾದ ವಿದ್ಯಾರ್ಥಿಗಳ ಗಮನಕ್ಕಾಗಿ ನಿಯಮಾನುಸಾರ ಸದರಿ ಯೋಜನೆ ಬಗ್ಗೆ ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಿ ಅರ್ಹ ಅಭ್ಯರ್ಥಿಗಳಿಗೆ ಅರಿವು ಮೂಡಿಸುವುದರೊಂದಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಈ ಮೂಲಕ ಸೂಚಿಸಲಾಗಿದೆ.
ಕರ್ನಾಟಕ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಷರತ್ತು ಮತ್ತು ನಿಬಂಧನೆಗಳನ್ನು ಉಲ್ಲೇಖಿತ ಸರ್ಕಾರಿ ಆದೇಶದಲ್ಲಿ ನಮೂದಿಸಲಾಗಿದೆ (ಪ್ರತಿ ಲಗತ್ತಿಸಿದೆ), ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಪೋರ್ಟಲ್/ಕಛೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.
- https://sevasindhugs, karnataka.gov.in/
- ಕರ್ನಾಟಕ ಓನ್
- ಬಾಪೋಜಿ ಸೇವಾ ಕೇಂದ್ರಗಳು
- ಗ್ರಾಮ-ಓನ್ ಕೇಂದ್ರಗಳು.
ಕರ್ನಾಟಕ ಯುವನಿಧಿ ಯೋಜನೆಗೆ ಸಂಬಂದಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 18005999919 ಮತ್ತು ಜಿಲ್ಲಾ ಉದ್ಯೋಗ ಅಧಿಕಾರಿಗಳನ್ನು ಸಂರ್ಪಕಿಸುವಂತೆ ಕೋರಲಾಗಿದೆ.