
ಬೆಂಗಳೂರು: ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂದು ಪೋಸ್ಟರ್ ಅಭಿಯಾನ ನಡೆಸಿದ್ದ ಮಾಜಿ ಶಾಸಕ ಸಿ,ಟಿ.ರವಿ ಪೋಸ್ಟರ್ ಗೆ ಕಾಂಗ್ರೆಸ್, ನಿಮ್ಮನ್ನು ಬಂಧಿಸುವ ಕಾರಣ ಬೇರೆ ಇದೆ ಅಲ್ಲವೇ? ಎಂದು ವ್ಯಂಗ್ಯವಾಗಿ ಪೋಸ್ಟರ್ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ಟೀಕೆಗೆ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕಾಂಗ್ರೆಸ್ಸಿಗರ ಹತಾಶೆಯ ಪರಮಾವಧಿ ಎಂದು ಗುಡುಗಿದ್ದಾರೆ.
ಮೊದಲು ನನ್ನ ವಿರುದ್ಧದ ಪೋಸ್ಟರ್ ಡಿಲಿಟ್ ಮಾಡಿ, ಇಲ್ಲವೇ ಕಾನೂನು ಹೋರಾಟ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಅಂದು ನಿಮ್ಮದೇ ಸರ್ಕಾರದ ಅವಧಿಯಲ್ಲಿ ನಾನು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಅಂದೇ ನಿಮ್ಮ ನಾಯಕರು ಪೊಲೀಸರ ಮೇಲೆ ಒತ್ತಡ ಹೇರಿ ಚಿಕ್ಕಮಗಳೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಎಲ್ಲಾ ಟೋಲ್ ಗಳಲ್ಲಿನ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಕಾರು ಚಲಾಯಿಸುತ್ತಿದ್ದವರು ಯಾರು ಎಂದು ಪರಿಶೀಲಿಸಿದ್ದರು. ಕಾರು ಚಾಲನೆ ಮಾಡುತ್ತಿದ್ದದ್ದು ನನ್ನ ಡ್ರೈವರ್ ಎಂಬುದನ್ನೂ ಖಚಿತಪಡಿಸಿಕೊಂಡಿದ್ದರು. ಹಾಗಾಗಿ ನಿಮ್ಮದೇ ಸರ್ಕಾರವಿದ್ದರೂ ಅಂದು ನನ್ನ ವಿರುದ್ಧ ಕೇಸ್ ದಾಖಲಾಗಿಲ್ಲ. ಆದರೆ ಈಗ ನನ್ನ ವಿರುದ್ಧ ಸುಳ್ಳು ಆರೋಪ ಮಾಡುವ ಹಾಗೂ ನನ್ನ ಮಾನ ಹಾನಿ ಮಾಡುವ ಪೋಸ್ಟರ್ ನ್ನು ಬಿಡುಗಡೆ ಮಾಡಿದ್ದೀರಿ. ತಕ್ಷಣ ಈ ಪೋಸ್ಟರ್ ಡಿಲಿಟ್ ಮಾಡಿ ಕ್ಷಮೆಯಾಚಿಸಿ. ಇಲ್ಲವಾದಲ್ಲಿ ಕಾನೂನು ಕ್ರಮ ಖಚಿತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ ನನ್ನನ್ನೂ ಬಂಧಿಸಿ ಎಂದು ಸಿ.ಟಿ.ರವಿ ಪೋಸ್ಟರ್ ಹಿಡಿದುಕೊಂಡಿರುವ ರೀತಿ ಕಾಂಗ್ರೆಸ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಿ.ಟಿ.ರವಿ ಕಿಡಿಕಾರಿದ್ದಾರೆ.