ನವದೆಹಲಿ: ನವದೆಹಲಿಯಲ್ಲಿ ಜನವರಿ 2 ರಂದು ನಡೆದ ಟ್ರಕ್ ಚಾಲಕರ ಸಂಘದ ಪ್ರತಿನಿಧಿಗಳು ಮತ್ತು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಸಭೆಯ ನಂತರ ಟ್ರಕ್ ಚಾಲಕರ ಸಂಘವು ಕರೆ ನೀಡಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ.
ನಿರ್ಲಕ್ಷ್ಯ ಚಾಲನೆಯ ಹೊಸ ನಿಯಮವನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ಆಂದೋಲನದ ನೇತೃತ್ವ ವಹಿಸಿರುವ ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ಸದಸ್ಯರೊಂದಿಗೆ ಸಭೆ ನಡೆಸಿದ ನಂತರ ಸರ್ಕಾರ ಹೇಳಿದೆ.
ನಾವು ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದೇವೆ, ಹೊಸ ನಿಯಮವನ್ನು ಇನ್ನೂ ಜಾರಿಗೆ ತಂದಿಲ್ಲ. ಭಾರತೀಯ ನ್ಯಾಯ ಸಂಹಿತಾ 106/2 ಅನ್ನು ಜಾರಿಗೊಳಿಸುವ ಮೊದಲು ನಾವು ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಹೇಳಿದ್ದಾರೆ.
ಟ್ರಕ್ಕರ್ ಗಳ ಸಂಸ್ಥೆಯ ಅಧ್ಯಕ್ಷ ಅಮೃತ್ ಲಾಲ್ ಮದನ್ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ರಕ್ ಚಾಲಕರ ಮುಷ್ಕರಕ್ಕೆ ಕಾರಣವಾಗಿರುವ ಹೊಸ ಹಿಟ್ ಅಂಡ್ ರನ್ ಕಾನೂನು ಕೈಬಿಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
10 ವರ್ಷಗಳ ಸಜೆ ಮತ್ತು ದಂಡವನ್ನು ತಡೆಹಿಡಿಯಲಾಗಿದೆ, ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ನ ಮುಂದಿನ ಸಭೆ ನಡೆಯುವವರೆಗೆ ಯಾವುದೇ ಕಾನೂನುಗಳನ್ನು ವಿಧಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸಭೆಯ ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಗೃಹ ಸಚಿವಾಲಯವು, ಹೊಸ ಹಿಟ್ ಅಂಡ್ ರನ್ ಕಾನೂನು ಜಾರಿಗೊಳಿಸುವ ನಿರ್ಧಾರವನ್ನು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ನೊಂದಿಗೆ ಸಮಾಲೋಚಿಸಿದ ನಂತರವೇ ತೆಗೆದುಕೊಳ್ಳಲಾಗುವುದು. ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ಮತ್ತು ಎಲ್ಲಾ ಚಾಲಕರು ತಮ್ಮ ಉದ್ಯೋಗಗಳಿಗೆ ಮರಳಲು ನಾವು ಮನವಿ ಮಾಡುತ್ತೇವೆ ಎಂದು ತಿಳಿಸಿದೆ.
ಕೆಲವು ಕಡೆ ಟ್ರಕ್ಕರ್‌ಗಳ ಸಂಘಗಳ ಮುಷ್ಕರವು ಜನವರಿ 2 ರಂದು ಎರಡನೇ ದಿನಕ್ಕೆ ಕಾಲಿಟ್ಟಿತು. ಟ್ರಕ್ಕರ್‌ಗಳ ಮುಷ್ಕರದ ನಿರೀಕ್ಷೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದೇಶಾದ್ಯಂತ ಹೆಚ್ಚಿನ ಪೆಟ್ರೋಲ್ ಪಂಪ್‌ಗಳಲ್ಲಿ ಟ್ಯಾಂಕ್‌ಗಳನ್ನು ತುಂಬಿದ್ದರೆ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ಕೆಲವು ಪೆಟ್ರೋಲ್ ಪಂಪ್‌ಗಳಲ್ಲಿ ಭಾರೀ ರಷ್‌ನಿಂದಾಗಿ ಸ್ಟಾಕ್ ಖಾಲಿಯಾಗಿದೆ ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ದಿನಕ್ಕೆ ಮುಷ್ಕರವನ್ನು ವಿಸ್ತರಿಸಿದ್ದರೆ ಅಥವಾ ಪ್ಯಾನ್-ಇಂಡಿಯಾ ಚಳವಳಿ ಪ್ರಾರಂಭಿಸಿದ್ದರೆ ತರಕಾರಿಗಳು, ಹಣ್ಣುಗಳು ಮತ್ತು ಹಾಲಿನಂತಹ ಅಗತ್ಯ ವಸ್ತು ಪೂರೈಕೆ ಮೇಲೆಯೂ ಸಹ ಪರಿಣಾಮ ಬೀರುವ ಸಾಧ್ಯತೆ ಇತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆಯನ್ನು ಬದಲಿಸಿದ BNS ಅಡಿಯಲ್ಲಿ, ನಿರ್ಲಕ್ಷ್ಯದ ಚಾಲನೆ ಮತ್ತು ಚಾಲಕರು ಓಡಿಹೋದ ಗಂಭೀರ ರಸ್ತೆ ಅಪಘಾತಗಳಿಗೆ 10 ವರ್ಷಗಳವರೆಗೆ ಜೈಲು ಮತ್ತು/ಅಥವಾ 7 ಲಕ್ಷ ರೂ. ದಂಡ ವಿಧಿಸುವ ನಿಬಂಧನೆಯನ್ನು ಸೇರಿಸಲಾಗಿದೆ.
ಹೆಚ್ಚಿನ ಟ್ರಕ್ ಚಾಲಕರು ಸಣ್ಣ ಅಪಘಾತಗಳ ವೇಳೆ ಕೂಡ ಸಹ ಓಡಿಹೋಗಲು ಮುಂದಾಗುತ್ತಾರೆ, ಇಲ್ಲದಿದ್ದರೆ ಅವರಿಗೆ ಜನಸಮೂಹದಿಂದ ಜೀವಕ್ಕೆ ಅಪಾಯವಾಗು ಸಂಭವ ಇರುತ್ತದೆ ಎಂದು ಟ್ರಕ್ಕರ್‌ಗಳು ಹೇಳಿದ್ದಾರೆ.