ನವದೆಹಲಿ: ವೈವಾಹಿಕ ಭಿನ್ನಾಭಿಪ್ರಾಯ ಪ್ರಕರಣಗಳಲ್ಲಿ ಪಿಂಚಣಿಗಾಗಿ ಪತಿ ಬದಲು ಮಕ್ಕಳನ್ನು ನಾಮನಿರ್ದೇಶನ ಮಾಡಲು ಮಹಿಳಾ ಉದ್ಯೋಗಿಗಳಿಗೆ ಸರ್ಕಾರ ಅವಕಾಶ ನೀಡಲಿದೆ.
ವೈವಾಹಿಕ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಯು ಈಗ ತನ್ನ ಮಗು ಅಥವಾ ಮಕ್ಕಳನ್ನು ಕುಟುಂಬ ಪಿಂಚಣಿಗೆ ನಾಮನಿರ್ದೇಶನ ಮಾಡಬಹುದು ಎಂದು ಕೇಂದ್ರವು ಮಂಗಳವಾರ ತಿಳಿಸಿದೆ.
ಕೇಂದ್ರೀಯ ನಾಗರಿಕ ಸೇವೆಗಳ(ಪಿಂಚಣಿ) ನಿಯಮಗಳು, 2021 ರ ನಿಯಮ 50, ಸರ್ಕಾರಿ ನೌಕರ ಅಥವಾ ನಿವೃತ್ತ ಸರ್ಕಾರಿ ನೌಕರನ ಮರಣದ ನಂತರ ಕುಟುಂಬ ಪಿಂಚಣಿ ಮಂಜೂರು ಮಾಡಲು ಅನುಮತಿಸುತ್ತದೆ.
ಮೃತ ಸರ್ಕಾರಿ ನೌಕರ ಅಥವಾ ಪಿಂಚಣಿದಾರರ ಸಂಗಾತಿ ಬದುಕಿದ್ದರೆ ಕುಟುಂಬ ಪಿಂಚಣಿಯನ್ನು ಮೊದಲು ಸಂಗಾತಿಗೆ ನೀಡಲಾಗುತ್ತದೆ. ಅವರು ಅನರ್ಹರಾದಲ್ಲಿ, ಮೃತರಾದಲ್ಲಿ ನಂತರ ಇತರ ಕುಟುಂಬದ ಸದಸ್ಯರು ಕುಟುಂಬ ಪಿಂಚಣಿಗೆ ಅರ್ಹರಾಗುತ್ತಾರೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ(DoPPW) ಈಗ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಮಹಿಳಾ ಉದ್ಯೋಗಿ ತನ್ನ ಗಂಡನ ಬದಲು ತನ್ನ ಮಗು/ಮಕ್ಕಳನ್ನು ಕುಟುಂಬ ಪಿಂಚಣಿಗಾಗಿ ನಾಮನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದೆ.
ತಿದ್ದುಪಡಿಯು ವಿಚ್ಛೇದನ ಅರ್ಜಿ ಅಥವಾ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಅಥವಾ ಭಾರತೀಯ ದಂಡದ ಅಡಿಯಲ್ಲಿರುವ ಪ್ರಕರಣಗಳ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಸಂದರ್ಭಗಳಲ್ಲಿ ಮಹಿಳಾ ಸರ್ಕಾರಿ ನೌಕರಳ ಕುಟುಂಬ ಪಿಂಚಣಿಯನ್ನು ತನ್ನ ಪತಿಗೆ ಆದ್ಯತೆಯಾಗಿ ಅರ್ಹ ಮಗುವಿಗೆ ವಿತರಿಸಲು ಅನುಮತಿಸುತ್ತದೆ ಎಂದು ಡಿಒಪಿಪಿಡಬ್ಲ್ಯೂ ಕಾರ್ಯದರ್ಶಿ ವಿ. ಶ್ರೀನಿವಾಸ್ ತಿಳಿಸಿದ್ದಾರೆ.
ಸ್ವೀಕರಿಸಿದ ಪ್ರಾತಿನಿಧ್ಯಗಳನ್ನು ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದೊಂದಿಗೆ ಸಮಾಲೋಚಿಸಿ ಈ ತಿದ್ದುಪಡಿಯನ್ನು DoPPW ರೂಪಿಸಿದೆ. ತಿದ್ದುಪಡಿಯು ಕುಟುಂಬ ಪಿಂಚಣಿ ಪ್ರಕರಣಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಅಧಿಕಾರ ನೀಡುತ್ತದೆ ಹೇಳಿದ್ದಾರೆ.