ಬೆಂಗಳೂರು : ಲಂಚ ಕೇಳಿದ್ದಕ್ಕೂ, ಪಡೆದಿದ್ದಕ್ಕೂ ಸಾಕ್ಷ್ಯ ಇರಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ‘ಬೇಡಿಕೆ ಮತ್ತು ಸ್ವೀಕಾರ’ ಕುರಿತು ಸ್ಪಷ್ಟ ಸಾಕ್ಷ್ಯ ಇರಬೇಕು ಎಂದು ಅಭಿಪ್ರಾಯಪಟ್ಟಿದೆ.
ಗದಗದ ನಿವೃತ್ತ ಸಬ್ ರಿಜಿಸ್ಟ್ರ್ರಾಶ್ರೀಕಾಂತ್ ವಿರುದ್ಧ ಎಸಿಬಿ ಪೊಲೀಸರು ದಾಖಲಿಸಿದ್ದ ಲಂಚ ಪ್ರಕರಣವನ್ನು ರದ್ದುಪಡಿಸಿದೆ. ಲಂಚ ಸ್ವೀಕಾರ ಆರೋಪದ ಮೇಲೆ ತಮ್ಮ ವಿರುದ್ಧ ಎಸಿಬಿ ಪೊಲೀಸರು ದಾಖಲಿಸಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಶ್ರೀಕಾಂತ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ದಾಳಿ ನಡೆಸುವಂತಹ ಸಂದರ್ಭದಲ್ಲಿ ಆರೋಪಿ ಸರ್ಕಾರಿ ಅಧಿಕಾರಿ ಮುಂದೆ ಕೆಲಸ ಬಾಕಿಯಿದ್ದು, ಅದನ್ನುನಿರ್ವಹಿಸಲು ಅವರು ಲಂಚಕ್ಕಾಗಿ ಬೇಡಿಕೆ ಇಟ್ಟಿರಬೇಕಾಗುತ್ತದೆ ಹಾಗೂ ಲಂಚ ಸ್ವೀಕರಿಸಿರಬೇಕಾಗುತ್ತದೆ. ಆಗ ಮಾತ್ರ ಆರೋಪ ಸಾಬೀತುಪಡಿಸಲು ಸಾಧ್ಯವಿದೆ ಎಂದು ಪೀಠ ಹೇಳಿದೆ. ಲಂಚ ಕೇಳಿದ್ದಕ್ಕೂ, ಪಡೆದಿದ್ದಕ್ಕೂ ಸಾಕ್ಷ್ಯ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್ ಕೇಸ್ ರದ್ದು ಮಾಡಿದೆ. ಅಲ್ಲದೇ ಅಧಿಕಾರಿಗಳು ಅರ್ಜಿದಾರರು ಬೇಡಿಕೆಯಿಟ್ಟ ಲಂಚ ಸ್ವೀಕರಿಸಿದ ಘಟನೆಯ ಪಂಚನಾಮೆ ಮಾಡಿಲ್ಲ. ಆದ್ದರಿಂದ ಪ್ರಕರಣ ವಿಚಾರಣೆಗೆ ಮುಂದುವರೆಸಿದರೆ ಕಾನೂನಿನ ದುರ್ಬಳಕೆಯಾಗಲಿದೆ ಎಂದು ಕೋರ್ಟ್ ಈ ಪ್ರಕರಣವನ್ನು ರದ್ದುಪಡಿಸಿದೆ.