ಕೋವಿಡ್ ಸಾಂಕ್ರಾಮಿಕದ ನಂತರ ಹೆಚ್ಚಿನ ಜನರು ಹೃದ್ರೋಗದಿಂದ ಬಳಲುತ್ತಿದ್ದಾರೆ. ಹೃದಯಾಘಾತದ ಪ್ರಕರಣಗಳು ನಿರಂತರವಾಗಿ ಮುನ್ನೆಲೆಗೆ ಬರುತ್ತಿವೆ. ಫಿಟ್ ಲುಕಿಂಗ್ ಸೆಲೆಬ್ರಿಟಿಗಳಿಂದ ಹಿಡಿದು ಸಣ್ಣ ಪುಟ್ಟ ಮಕ್ಕಳು ಕೂಡ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ.
ಗುಜರಾತ್ನಲ್ಲಿ ನವರಾತ್ರಿಯ ಗರ್ಬಾ ಕಾರ್ಯಕ್ರಮದ ವೇಳೆ ಅನೇಕರು ಮೂರ್ಛೆ ಹೋಗಿದ್ದರು. 10ಕ್ಕೂ ಹೆಚ್ಚು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಪೈಕಿ ಓರ್ವನಿಗೆ ಕೇವಲ 17 ವರ್ಷ. ಇತ್ತೀಚೆಗೆ ‘ಗೋಲ್ಮಾಲ್’ ಚಿತ್ರದ ನಟ ಶ್ರೇಯಸ್ ತಾಲ್ಪಡೆ ಹೃದಯಾಘಾತಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಕೂಡ ಹೃದಯಾಘಾತಕ್ಕೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ 2021ಕ್ಕೆ ಹೋಲಿಸಿದರೆ 2022ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 12.5 ಪ್ರತಿಶತದಷ್ಟು ಹೆಚ್ಚಾಗಿದೆ.
ಜಪಾನಿನ ಅತಿದೊಡ್ಡ ವೈಜ್ಞಾನಿಕ ಸಂಸ್ಥೆಯಾದ RIKEN ನ ಸಂಶೋಧಕರು ಸೇರಿದಂತೆ ಅನೇಕ ತಂಡಗಳು ಈ ಬಗ್ಗೆ ಸಂಶೋಧನೆ ನಡೆಸಿವೆ. ತಜ್ಞರ ಪ್ರಕಾರ ಹೃದಯದಲ್ಲಿ ನಿರಂತರವಾದ ವೈರಲ್ ಸೋಂಕುಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ. ಹೃದ್ರೋಗ ಇಲ್ಲದಿದ್ದರೂ ಈ ಸೋಂಕುಗಳು ಹಾರ್ಟ್ ಅಟ್ಯಾಕ್ಗೆ ಕಾರಣವಾಗುತ್ತವೆ.
ಕೆಲವರು ಇದನ್ನು COVID-19 ಲಸಿಕೆಗೆ ಲಿಂಕ್ ಮಾಡಿದ್ದಾರೆ. ಆದರೆ WHO, US CDC ಮತ್ತು ICMR ನಂತಹ ಜಾಗತಿಕ ಆರೋಗ್ಯ ಅಧಿಕಾರಿಗಳ ಪ್ರಕಾರ ಹೆಚ್ಚುತ್ತಿರುವ ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ಯಾವುದೇ ಸಂಬಂಧವಿಲ್ಲ. ವ್ಯಾಕ್ಸಿನೇಷನ್ ಪಡೆಯದವರು ಕೋವಿಡ್ನಿಂದ ಹೃದಯ ರಕ್ತನಾಳದ ಸಮಸ್ಯೆಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ತಜ್ಞರ ಪ್ರಕಾರ ಕೋವಿಡ್ ಲಸಿಕೆಗಳು ಸುರಕ್ಷಿತವಾಗಿವೆ.
ಹೃದ್ರೋಗದ ಅಪಾಯ ಹೆಚ್ಚಾಗುವುದು ಹೇಗೆ ?
ಹೆಚ್ಚಿನ ಸೋಡಿಯಂ ಇರುವ ಆಹಾರ ಸೇವನೆ, ವ್ಯಾಯಾಮದ ಕೊರತೆ, ಧೂಮಪಾನ, ಅತಿಯಾದ ಮದ್ಯಪಾನ, ಜಡ ಜೀವನಶೈಲಿ ಮುಂತಾದವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಅಂಶಗಳು. ಆರೋಗ್ಯ ತಜ್ಞರ ಪ್ರಕಾರ ಹೆಚ್ಚಿನ ಹಿಮೋಗ್ಲೋಬಿನ್ ಮಟ್ಟವು ಹೃದಯಾಘಾತ, ಪಾರ್ಶ್ವವಾಯು ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.
ಪಾಲಿಸಿಥೆಮಿಯಾ ಎನ್ನುವುದು ಮೂಳೆ ಮಜ್ಜೆಯಲ್ಲಿನ ಅಸಹಜತೆಗಳಿಂದಾಗಿ ಮಾನವ ದೇಹದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚಾಗುವ ಸ್ಥಿತಿಯಾಗಿದೆ. ಈ ಹೆಚ್ಚುವರಿ ಜೀವಕೋಶಗಳು ರಕ್ತವನ್ನು ದಪ್ಪವಾಗಿಸುತ್ತವೆ, ಅದರ ಹರಿವನ್ನು ನಿಧಾನಗೊಳಿಸುತ್ತವೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.
ತಜ್ಞರ ಪ್ರಕಾರ ಹೆಚ್ಚಿನ ಹಿಮೋಗ್ಲೋಬಿನ್ ಮಟ್ಟವನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕೆಲವೊಮ್ಮೆ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಕಾಲುಗಳು ಮತ್ತು ಹೊಟ್ಟೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ದೈಹಿಕ ಒತ್ತಡ ಮತ್ತು ತೊಡಕುಗಳು ಇವಕ್ಕೆಲ್ಲ ಅತಿಯಾದ ವ್ಯಾಯಾಮ ಕೂಡ ಕಾರಣವಾಗಬಹುದು. ಹಾಗಾಗಿ ಅತಿಯಾದ ವ್ಯಾಯಾಮ ಮಾಡದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಹೃದಯಾಘಾತದ ಲಕ್ಷಣಗಳು
ತೀವ್ರವಾದ ಕೋವಿಡ್ನಿಂದ ಬದುಕುಳಿದವರು ಸಾಮಾನ್ಯವಾಗಿ ದೀರ್ಘಕಾಲದ ದೈಹಿಕ ಒತ್ತಡ ಮತ್ತು ತೊಡಕುಗಳನ್ನು ಅನುಭವಿಸುತ್ತಾರೆ. ಇದು ಅವರ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಹೃದಯಾಘಾತದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಆದರೆ ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಉಸಿರಾಟದ ಸಮಸ್ಯೆ, ಹೃದಯರಕ್ತನಾಳದ ಸಮಸ್ಯೆ, ಆಯಾಸ, ಸ್ನಾಯು ಮತ್ತು ಕೀಲು ನೋವು, ನರವೈಜ್ಞಾನಿಕ ತೊಂದರೆ, ಜಠರಗರುಳಿನ ಸಮಸ್ಯೆಗಳು ಮತ್ತು ಹೊಟ್ಟೆಯ ತೊಂದರೆಗಳು.