ಪ್ರಸ್ತಕ ಸಾಲಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಮಹಿಳಾ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಸ್ಥೆ ಹಾಗೂ ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಚಲಿತ ವಿದ್ಯಮಾನಗಳಿಂದ ಮಹಿಳಾ ಕ್ಷೇತ್ರದಲ್ಲಿ ಮತ್ತು ಕಳೆದ 5 ವರ್ಷಗಳಿಂದ ಮಹಿಳಾ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅರ್ಹ ಸಂಸ್ಥೆಗಳು ಹಾಗೂ ಇತರೆ ವಿವಿಧ 5 ಕ್ಷೇತ್ರಗಳಾದ ಕ್ರೀಡೆ, ಕಲೆ, ಸಾಹಿತ್ಯ, ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೈರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಗೆ ವೀರ ಮಹಿಳೆ ಪ್ರಶಸ್ತಿ ನೀಡಲು ಉದ್ದೇಶಿಸಿದ್ದು, ಅರ್ಹ ಮಹಿಳೆಯರು ನಿಗದಿತ ನಮೂನೆಯನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಸ್.ಪಿ. ಸರ್ಕಲ್, ದೇವಿನಗರ, ಬಳ್ಳಾರಿ. ಇಲ್ಲಿಗೆ 2024ರ ಜನವರಿ 10 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಷರತ್ತುಗಳು
18 ರಿಂದ 45 ವರ್ಷ ವಯೋಮಿತಿ ಹೊಂದಿರಬೇಕು. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ವೇತನ ಪಡೆಯುತ್ತಿರುವ ವ್ಯಕ್ತಿಗಳು ಅರ್ಹರಾಗಿರುವುದಿಲ್ಲ. ವೀರ ಮಹಿಳೆ ಪ್ರಶಸ್ತಿ ಪಡೆಯುವ ಮಹಿಳೆಯು ವಿಶೇಷ ಶೌರ್ಯ ಹಾಗೂ ಸಾಧನೆಯನ್ನು ಮಾಡಿರಬೇಕು. ಈ ಸಾಧನೆಯು ಸಾರ್ವಜನಿಕರ ಗಮನಕ್ಕೆ ಬಂದಿರಬೇಕು. ಈ ಸಾಧನೆಯು ಪ್ರಶಸ್ತಿ ಪಡೆಯುವ ಕಳೆದ ಸಾಲಿನ ಜನವರಿ 1 ರಿಂದ ಡಿಸೆಂಬರ್ 31ರ ಒಳಗೆ ಇರಬೇಕು.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಅಥವಾ ದೂ.08392-266219ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.