ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬೆಳಗೋಡು ಗ್ರಾಮದಿಂದ ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ತೀವ್ರವಾಗಿ ಮಾರ್ಗ ಮಧ್ಯದಲ್ಲಿ ಆಂಬುಲೆನ್ಸ್ ನಲ್ಲೆ ಮಗುವಿಗೆ ಜನ್ಮ ನೀಡಿದ್ದಾರೆ.
ರಸ್ತೆ ಬದಿಯಲ್ಲಿ ಅಂಬುಲೆನ್ಸ್ ನಿಲ್ಲಿಸಿ ವಾಹನದಲ್ಲಿ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗೋಡಿನ ಮಣಿಕಂಠ ಅವರ ಪತ್ನಿ ಪವಿತ್ರಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಂಬುಲೆನ್ಸ್ ಮೂಲಕ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಕರೆ ತರಲಾಗಿದೆ. ಈ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲೇ ಅವರಿಗೆ ಹೆರಿಗೆ ನೋವು ತೀವ್ರವಾಗಿದ್ದು, ಸಮಯ ಪ್ರಜ್ಞೆ ತೋರಿದ ಆಂಬುಲೆನ್ಸ್ ಚಾಲಕ ಗಂಗಾಧರ ನಾಯ್ಕ್ ಮತ್ತು ಶುಶ್ರೂಷಕಿ ಮಂಜುಳಾ ಅವರು ರಸ್ತೆ ಬದಿಯಲ್ಲಿ ಆಂಬುಲೆನ್ಸ್ ನಿಲ್ಲಿಸಿ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪವಿತ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದು, ನಂತರ ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ. ಆಂಬುಲೆನ್ಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.