ಚಳಿಗಾಲದಲ್ಲಿ ಶೀತ, ಕೆಮ್ಮಿನ ಜೊತೆಗೆ ನಮ್ಮನ್ನು ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ ಕಿವಿನೋವು. ಇದು ಸಹಿಸಲಸಾಧ್ಯವಾದ ಸಮಸ್ಯೆಗಳಲ್ಲೊಂದು. ಕಿವಿನೋವು ಒಮ್ಮೆ ಪ್ರಾರಂಭವಾಯಿತೆಂದರೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಕಿವಿ ನೋವು ಶುರುವಾದ ತಕ್ಷಣ ವೈದ್ಯರ ಬಳಿ ಓಡುವ ಬದಲು ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ.
ಕಿವಿಯಲ್ಲಿ ಕೊಳಕು ಸೇರಿಕೊಂಡಾಗ ಕೂಡ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ನಿವಾರಿಸಲು ಕಿವಿಗೆ ಒಂದೆರಡು ಹನಿ ಸಾಸಿವೆ ಎಣ್ಣೆಯನ್ನು ಹಾಕಿ. ಕಿವಿಗಳಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ನಿವಾರಿಸಲು ಸಾಸಿವೆ ಎಣ್ಣೆಗೆ ಬೆಳ್ಳುಳ್ಳಿಯನ್ನು ಹಾಕಿ ಅದನ್ನು ಬಿಸಿ ಮಾಡಬೇಕು. ಅದು ಕೊಂಚ ತಣ್ಣಗಾದ ಬಳಿಕ ಒಂದೆರಡು ಹನಿಗಳನ್ನು ಕಿವಿಗೆ ಹಾಕಿ. ಇದು ಕೂಡ ಕಿವಿನೋವನ್ನು ನಿವಾರಿಸುತ್ತದೆ.
ಕಿವಿ ನೋವನ್ನು ಹೋಗಲಾಡಿಸಲು ಉಪ್ಪನ್ನು ಕೂಡ ಬಳಸಬಹುದು. ಕಲ್ಲುಪ್ಪನ್ನು ಬಿಸಿ ಮಾಡಿ ಅದನ್ನು ಹತ್ತಿಬಟ್ಟೆಯಲ್ಲಿ ಹಾಕಿ ಉಂಡೆಯಂತೆ ಕಟ್ಟಿಕೊಳ್ಳಿ. ಅದರಿಂದ ಕಿವಿಯ ಅಕ್ಕಪಕ್ಕದಲ್ಲಿ ಶಾಖ ಕೊಡುವುದರಿಂದ ನೋವು ತಕ್ಷಣವೇ ಮಾಯವಾಗುತ್ತದೆ. ಕಿವಿಯ ಊತವೂ ಕಡಿಮೆಯಾಗುತ್ತದೆ.
ತುಳಸಿ ರಸವು ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಕಿವಿ ನೋವು ಕಾಣಿಸಿಕೊಂಡರೆ ತುಳಸಿ ಎಲೆಯ ರಸವನ್ನು ತೆಗೆದು ಅದನ್ನು ಸೋಸಿ ಕಿವಿಗೆ ಹಾಕಿ. ಇದರಿಂದ ನೋವು ಕಡಿಮೆಯಾಗುತ್ತದೆ.
ಈರುಳ್ಳಿ ರಸ ಕೂಡ ಕಿವಿ ನೋವು ಮತ್ತು ಕೀವುಗಳನ್ನು ಕಡಿಮೆ ಮಾಡುತ್ತದೆ. ಈರುಳ್ಳಿ ರಸವನ್ನು ತೆಗೆದು ಅದನ್ನು ಸೋಸಿಕೊಂಡು ದಿನಕ್ಕೆ 3 ಬಾರಿ ಕಿವಿಗೆ ಹಾಕಿ, ಈ ರೀತಿ ಮಾಡುವುದರಿಂದ ಕಿವಿ ನೋವು ನಿವಾರಣೆಯಾಗುತ್ತದೆ.