ಮೈಸೂರು: ಹನಿ ಟ್ರ್ಯಾಪ್ ನಡೆಸಿ ಕೇರಳ ಉದ್ಯಮಿ ಬ್ಲಾಕ್ ಮೇಲ್ ಮಾಡಿ 5 ಲಕ್ಷ ರೂ. ದೋಚಿದ್ದ ಯುವತಿ ಸೇರಿ ಮೂವರನ್ನು ಮೈಸೂರು ಗ್ರಾಮಾಂತರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಮಡಿಕೇರಿ ಮೂಲದ ಯುವತಿ, ಜಲುಲ್ಲಾ ರೆಹಮಾನ್ ಮತ್ತು ರಿಜ್ವಾನ್ ಬಂಧಿತ ಆರೋಪಿಗಳು ಬಂಧಿತರಿಂದ 50,000 ರೂ. ನಗದು, ಕಾರ್ ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೇರಳದ ತಿರುನೆಲ್ಲಿಯ ಉದ್ಯಮಿ ಸುನ್ನಿ ಹನಿಟ್ರ್ಯಾಪ್ ಗೆ ಒಳಗಾದವರು. 9 ತಿಂಗಳ ಹಿಂದೆ ಕಳೆದ ಮಾರ್ಚ್ ನಲ್ಲಿ ಪ್ರಕರಣ ನಡೆದಿತ್ತು. ಕೇರಳಕ್ಕೆ ತೆರಳುತ್ತಿದ್ದ ಉದ್ಯಮಿಯನ್ನು ಮಾನಂದವಾಡಿ ರಸ್ತೆಯಲ್ಲಿ ತಡೆದ ಇಬ್ಬರು ಅಪಹರಿಸಿ ಮನೆಯೊಂದಕ್ಕೆ ಕರೆದೊಯ್ದಿದ್ದಾರೆ. ಯುವತಿಯೊಂದಿಗೆ ಅರೆ ನಗ್ನ ಫೋಟೋ, ವಿಡಿಯೋ ತೆಗೆದು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಇಲ್ಲದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುವುದಾಗಿ ಬೆದರಿಸಿದ್ದಾರೆ. ಬೆದರಿದ ಉದ್ಯಮಿ ಸುನ್ನಿ 5 ಲಕ್ಷ ರೂಪಾಯಿ ನೀಡಿದ್ದಾರೆ. ನಂತರ ಅವರ ಬಳಿ ಇದ್ದ ಉಂಗುರ ಕಸಿದುಕೊಂಡು ಖದೀಮರು ಪರಾರಿಯಾಗಿದ್ದು, ತಿರುನೆಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹನಿ ಟ್ರ್ಯಾಪ್ ಸಂಬಂಧ ಸುನ್ನಿ ದೂರ ನೀಡಿದ್ದರು.
ಘಟನೆ ಮೈಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಇಲ್ಲಿಗೆ ಪ್ರಕರಣ ವರ್ಗಾಯಿಸಲಾಗಿತ್ತು. ತನಿಖೆ ಕೈಗೊಂಡ ಮೈಸೂರು ಗ್ರಾಮಾಂತರ ಠಾಣೆ ಪೋಲೀಸರು ಯುವತಿ ಸೇರಿ ಮೂವರನ್ನು ಬಂಧಿಸಿದ್ದಾರೆ.