ಟಾಟಾ ಮೋಟಾರ್ಸ್ ಕಂಪನಿಯ ಉತ್ಪನ್ನಗಳ ಬಗ್ಗೆ ಇತ್ತೀಚಿಗೆ ಹೆಚ್ಚಿನ ದೂರುಗಳು ಕೇಳಿಬರುತ್ತಿವೆ. ಇದರ ಮುಂದುವರೆದ ಭಾಗವಾಗಿ ಮತ್ತೊಬ್ಬ ಗ್ರಾಹಕರು ಟಾಟಾ ನೆಕ್ಸಾನ್ ಕಾರ್ ನ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಸಮಸ್ಯೆ ಬಗ್ಗೆ ಕಂಪನಿ ನಡೆದುಕೊಂಡ ರೀತಿ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಸ್ನೇಹಿತರಿಗೆ ಸೇರಿದ್ದ ಕಾರನ್ನು ತನ್ಮಯ್ ರಾಜು ಎಂಬುವವರು ಚಲಾಯಿಸುತ್ತಿದ್ದರು. ಮಧ್ಯಪ್ರದೇಶದ ಸಿಧಿಯಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಕಾರ್ ನಿಯಂತ್ರಣ ಕಳೆದುಕೊಂಡಿದೆ. ಕಾರ್ ನ ಹಿಂಭಾಗದ ಚಕ್ರದ ರಿಬ್ ಸಂಪೂರ್ಣವಾಗಿ ಮುರಿದುಬಿದ್ದಿತ್ತು. ಇದರಿಂದಾಗಿ ಟೈರ್ ಬೇರ್ಪಟ್ಟಿದ್ದು ಕಾರ್ ರಸ್ತೆಯಿಂದ ಸ್ಕಿಡ್ ಆಗಿ ಪಕ್ಕಕ್ಕೆ ಉರುಳಿದೆ. ಈ ವೇಳೆ ಅದೃಷ್ಟವಶಾತ್ ಕಾರ್ ನಲ್ಲಿದ್ದವರು ಪಾರಾಗಿದ್ದಾರೆ. ಆದರೆ ಈ ಭೀಕರ ಅನಾಹುತದಿಂದ ಪಾರಾದ ಅವರು ಕಾರ್ ಸುರಕ್ಷತೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಇದನ್ನು ಟಾಟಾ ಮೋಟಾರ್ಸ್ ಗಮನಕ್ಕೆ ತಂದು ಸಹಾಯಕ್ಕೆ ಮನವಿ ಮಾಡಿದಾಗ, ಕಂಪನಿ ಇಬ್ಬರನ್ನು ಟೋಯಿಂಗ್ ಟ್ರಕ್ ನೊಂದಿಗೆ ಕಳಿಸಿದೆ. ಆದರೆ ಅವರು 6 ಗಂಟೆ ಪರಿಶೀಲನೆ ನಂತರ ಕಾರನ್ನ ಎಳೆದು ರಸ್ತೆಗೆ ತರಲು ಕ್ರೇನ್ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಹೇಳಿ ಹೋಗಿದ್ದಾರಂತೆ. 28 ಗಂಟೆಗಳ ಕಾಲ ಈ ತೊಂದರೆಯಲ್ಲಿ ಸಿಲುಕಿದ ತನ್ಮಯ್ ಗೆ ಮತ್ತಷ್ಟು ತೊಂದರೆ ಎದುರಾಯಿತು.
ಟೋಯಿಂಗ್ ಸೇವೆಯ ಶುಲ್ಕ ಪಾವತಿಸುವಂತೆ ಟಾಟಾ ಮೋಟಾರ್ಸ್‌ನ ಬೇಡಿಕೆಯಿಟ್ಟಿದೆ. ಮರುದಿನ ತನ್ಮಯ್ ರಾಜು ಅವರು ಖಾಸಗಿ ಟೋಯಿಂಗ್ ಸೇವೆ ಬಳಸಿಕೊಂಡು ರೇವಾ ಟಾಟಾ ಮೋಟಾರ್ಸ್ ವರ್ಕ್‌ಶಾಪ್‌ಗೆ ಕಾರನ್ನು ಸಾಗಿಸಿದ್ದಾರೆ. ಆದರೆ ಕಾರ್ ಕೊಂಡ 2 ವರ್ಷದೊಳಗೇ ಹೀಗಾಗಿದ್ದು ಇದರ ಸಂಪೂರ್ಣ ಜವಾಬ್ದಾರಿಯನ್ನ ಟಾಟಾ ಮೋಟಾರ್ಸ್ ವಹಿಸಿಕೊಳ್ಳಬೇಕು. ತಮಗಾದ ನಷ್ಟವನ್ನ ತುಂಬಿಕೊಂಡಬೇಕೆಂದು ಕೇಳಿಕೊಂಡಿದ್ದಾರೆ.
ಹಾನಿಗೊಳಗಾದ ವೀಲ್ ಹಬ್‌ನ ಚಿತ್ರಗಳನ್ನು ಹಂಚಿಕೊಂಡಿದ್ದು ಟೋಯಿಂಗ್ ವೆಚ್ಚವನ್ನು ಮರುಪಾವತಿ ಮಾಡುವುದು ಸೇರಿದಂತೆ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಟಾಟಾ ಮೋಟಾರ್ಸ್ ವಹಿಸಿಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಟಾಟಾ ಮೋಟಾರ್ಸ್‌ನಿಂದ ಪ್ರತಿಕ್ರಿಯೆಯು ಬಂದಿದ್ದು “ಹಾಯ್ ತನ್ಮಯ್, ನೀವು ಎತ್ತಿರುವ ಕಾಳಜಿಯನ್ನು ನಾವು ನಿಜವಾಗಿಯೂ ಪರಿಶೀಲಿಸಲು ಬಯಸುತ್ತೇವೆ. ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪರ್ಯಾಯ ಸಂಪರ್ಕ ಸಂಖ್ಯೆ, ಇಮೇಲ್ ಐಡಿ ಮತ್ತು ಡೀಲರ್ ಮಾಹಿತಿಯನ್ನು ಸಂದೇಶದ ಮೂಲಕ ಹಂಚಿಕೊಳ್ಳಿ, ಇದರಿಂದ ನಾವು ಹೆಚ್ಚಿನ ಸಹಾಯಕ್ಕಾಗಿ ನಿಮ್ಮೊಂದಿಗೆ ಸಂಪರ್ಕ ಹೊಂದಬಹುದು” ಎಂದು ತಿಳಿಸಿದೆ.
ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿರುವ ಕಾರಿನಲ್ಲಿ ಅಂತಹ ನಿರ್ಣಾಯಕ ಘಟಕದ ವೈಫಲ್ಯವು ವಾಹನದ ವಿಶ್ವಾಸಾರ್ಹತೆ ಮತ್ತು ಪ್ರಯಾಣಿಕರ ಜೀವನಕ್ಕೆ ಸಂಭವನೀಯ ಅಪಾಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.