ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಡಿಸೆಂಬರ್ 25ರ ವರೆಗೆ 31,43,163 ಮಂದಿ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದು, ಅಲ್ಲದೆ ಕಳೆದ 39 ದಿನಗಳ ಅವಧಿಯಲ್ಲಿ ಒಟ್ಟು 204.30 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಮಂಗಳವಾರದಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪ್ರಶಾಂತ್, ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ್ದು, ನಾಣ್ಯದ ರೂಪದಲ್ಲಿ ಸಲ್ಲಿಕೆಯಾಗಿರುವ ಕಾಣಿಕೆಯನ್ನು ಎಣಿಕೆ ಮಾಡಿದರೆ ಆದಾಯ ಇನ್ನಷ್ಟು ಹೆಚ್ಚಲಿದೆ ಎಂದಿದ್ದಾರೆ.
ಈಗ ಸಂಗ್ರಹವಾಗಿರುವ 204.30 ಕೋಟಿ ರೂಪಾಯಿ ಆದಾಯದಲ್ಲಿ ಕಾಣಿಕೆಯಿಂದ 63.89 ಕೋಟಿ ರೂಪಾಯಿ ಬಂದಿದ್ದರೆ, ‘ಅರವಣ’ ಪ್ರಸಾದ ಮಾರಾಟದಿಂದ 96.32 ಕೋಟಿ ರೂಪಾಯಿ ಹಾಗೂ ‘ಅಪ್ಪಂ’ ಪ್ರಸಾದ ಮಾರಾಟದಿಂದ 12.38 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಮಂಡಲ ಪೂಜೆ ಇಂದು ನಡೆಯಲಿದ್ದು, ಇದಾದ ಬಳಿಕ ದೇಗುಲದ ಬಾಗಿಲು ಮುಚ್ಚಲಾಗುತ್ತದೆ. ಇದನ್ನು ಡಿಸೆಂಬರ್ 30 ರಂದು ಮತ್ತೆ ತೆರೆಯಲಾಗುವುದು ಎಂದು ಪ್ರಶಾಂತ್ ತಿಳಿಸಿದ್ದಾರೆ.