ಶಿವಮೊಗ್ಗ: ವಿಧಾನ ಮಂಡಲ ಅಧಿವೇಶನಗಳು ಅರ್ಥ ಕಳೆದುಕೊಳ್ಳುತ್ತಿದ್ದು, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗುವಷ್ಟು ಬೇಸರ ತರಿಸುತ್ತಿವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಡೆಯುತ್ತಿದ್ದ ಅಧಿವೇಶನಗಳು ಅರ್ಥಗರ್ಭಿತವಾಗಿರುತ್ತಿದ್ದವು. ಸದನದಲ್ಲಿ ಪಾಲ್ಗೊಂಡು ಚರ್ಚಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿತ್ತು. ಆದರೆ, ಈಗ ಸಭಾಪತಿಗೇ ಗೌರವವಿಲ್ಲ. ಶಾಸನಸಭೆಗಳು ವಿಷಯಧಾರಿತವಾಗಿ ನಡೆಯುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಅವರು ಇವರನ್ನು ಬೈಯ್ಯುವುದು, ಇವರು ಅವರನ್ನು ತೆಗಳುವುದು ಸದನದಲ್ಲಿ ನಡೆಯುತ್ತಿದೆ. ಚರ್ಚೆಗಳು ಕಳಪೆಯಾಗುತ್ತಿವೆ. ನಾನು ಕೂಡ ಇದನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ. ಈ ಬಗ್ಗೆ ನನಗೂ ಬೇಜಾರಾಗಿದೆ. ರಾಜೀನಾಮೆ ಕೊಟ್ಟು ಹೋಗುವುದೇ ಒಳ್ಳೆಯದೆಂದು ಹಿಂದೆ ಹೇಳಿದ್ದೆ ಎಂದು ತಿಳಿಸಿದ್ದಾರೆ.