![](https://kannadadunia.com/wp-content/uploads/2023/12/dinesh-6.jpg)
ಬೆಂಗಳೂರು : ಖಾಸಗಿ ಕಂಪನಿಗಳಿಂದ ಸಾಮಾಜಿಕ ಹೊಣೆಗಾರಿಕೆ ನಿಧಿ ಸಂಗ್ರಹಿಸಿ 100 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 200 ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿ ಪಡಿಸುವ ಬಗ್ಗೆ ಆರೋಗ್ಯ ಇಲಾಖೆ ಸಿಎಸ್ ಆರ್ ಬಾಕ್ಸ್ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಸಿಎಸ್ಆರ್ ಬಾಕ್ಸ್ (CSRBOX) ಸಂಸ್ಥೆಯ ಮೂಲಕ ವಿವಿಧ ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಸಿ, ರಾಜ್ಯದ 200 ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ, ಅಂದಾಜು ₹100 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯವನ್ನು ಉನ್ನತೀಕರಿಸುವ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು ಎಂದು ತಿಳಿಸಿದ್ದಾರೆ.
ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸಮಪರ್ಕವಾಗಿ ಬಳಸಿಕೊಂಡು ರಾಜ್ಯದಲ್ಲಿನ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಖಾಸಗಿ ಕಂಪನಿಗಳ ಜೊತೆ ಸಂವಹನ ಸಾಧಿಸಲು ಇಲಾಖೆಯ ಉಪ ನಿರ್ದೇಶಕರನ್ನು ರಾಜ್ಯಮಟ್ಟದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಖಾಸಗಿ ಸಂಸ್ಥೆಗಳು ನಮ್ಮ ಇಲಾಖೆಯ ಜೊತೆ ಕೈ ಜೋಡಿಸುವುದರಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನ ಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯಲಿದೆ. ಹಾಗೂ ನಮ್ಮ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಸಹಾಯಕಾರಿಯಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯದ 108 ಆಂಬ್ಯುಲೆನ್ಸ್ ಆರೋಗ್ಯ ಸೇವೆಯನ್ನು ಬಲಪಡಿಸುವ ನಿಟ್ಟಿನಲ್ಲಿ ₹82.02 ಕೋಟಿ ವೆಚ್ಚದ 262 ಹೊಸ 108 ಆಂಬ್ಯುಲೆನ್ಸ್‌ಗಳಿಗೆ ಇತ್ತೀಚೆಗಷ್ಟೇ ಚಾಲನೆ ನೀಡಲಾಗಿದೆ. ಸಮಿತಿಯ ಸದಸ್ಯರು ನೀಡಿರುವ ಸಲಹೆಗಳನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಿತ ಆಂಬ್ಯುಲೆನ್ಸ್ ಸೇವೆ ನೀಡುವ ನಿಟ್ಟಿನಲ್ಲಿ ಇಲಾಖೆಯು ಯೋಜನೆ ರೂಪಿಸಲಿದೆ ಎಂದು ತಿಳಿಸಿದರು.
ವಿವಿಧ ರಾಜ್ಯಗಳಲ್ಲಿ ಆಂಬ್ಯುಲೆನ್ಸ್‌ಗಳ ಸಮರ್ಪಕ ನಿರ್ವಹಣೆಗೆ ಅನುಷ್ಠಾನಗೊಳಿಸಿರುವ ವಿವಿಧ ಮಾದರಿಗಳ ಅಧ್ಯಯನಕ್ಕೆ ನೇಮಿಸಲಾಗಿದ್ದ ಹಿರಿಯ ಆರೋಗ್ಯ ಅಧಿಕಾರಿಗಳ ತಂಡದ ಸದಸ್ಯರು ಆರೋಗ್ಯ ಸೌಧದಲ್ಲಿ ನಡೆದ ಸಭೆಯಲ್ಲಿ ತಮ್ಮ ವರದಿಯನ್ನು ಮಂಡಿಸಿದರು.