ಬೆಂಗಳೂರು: ಶಾಲಾ ಶೌಚಾಲಯ ಸ್ವಚ್ಛತೆ ವಿಚಾರದಲ್ಲಿ ಮುಖ್ಯ ಶಿಕ್ಷಕರುಗಳನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ. ಜಯಪ್ಪ ದೂರಿದ್ದಾರೆ.
ಶಾಲಾ ಶೌಚಾಲಯಗಳ ಸ್ವಚ್ಛತೆಗೆ ಸೂಕ್ತ ಅನುದಾನ ನೀಡದೇ, ಡಿ ದರ್ಜೆ ನೌಕರರನ್ನು ನೇಮಕ ಮಾಡದೇ ಸರ್ಕಾರ ಮುಖ್ಯ ಶಿಕ್ಷಕರನ್ನು ಬಲಿ ಮಾಡುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಅನೇಕ ವರ್ಷಗಳಿಂದ ಡಿ ದರ್ಜೆ ನೌಕರರನ್ನು ನೇಮಕ ಮಾಡಿಲ್ಲ. ಸ್ವಚ್ಛತೆಗೆ ತಗಲುವ ವೆಚ್ಚವನ್ನು ವೈಜ್ಞಾನಿಕ ರೀತಿಯಲ್ಲಿ ಅಂದಾಜು ಮಾಡಿ ನೀಡುವುದಿಲ್ಲ. ಶೌಚಾಲಯ ಸ್ವಚ್ಛತೆ ಹೇಗೆ ನಿರ್ವಹಿಸಬೇಕೆಂಬುದನ್ನು ಕೂಡ ಸರ್ಕಾರ ಹೇಳಿಲ್ಲ. ಇದನ್ನೆಲ್ಲ ಸರಿಪಡಿಸಬೇಕಾದ ಶಿಕ್ಷಣ ಇಲಾಖೆ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸುವುದು, ಎಫ್ಐಆರ್ ದಾಖಲಿಸುವುದು, ಬಂಧಿಸುವ ಮಟ್ಟಕ್ಕೆ ಹೋಗಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.