ಅಮೆರಿಕದಲ್ಲಿ 32 ವರ್ಷದ ಮಹಿಳೆಯೊಬ್ಬರು ಎರಡು ದಿನದ ಅಂತರದಲ್ಲಿ ಎರಡು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ.
32 ವರ್ಷದ ಕೆಲ್ಸಿ ಹ್ಯಾಚರ್ 20 ಗಂಟೆ ಕಾಲ ಪ್ರಸವವೇದನೆ ಅನುಭವಿಸಿದ್ದರು. 20 ಗಂಟೆ ಅವಧಿ ಅಂತರದಲ್ಲಿ ಬೇರೆ ಬೇರೆ ದಿನ 2 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಅವರು ಡಬಲ್ ಸಂತೋಷದ ಘಳಿಗೆಯನ್ನ ನೋಡಿದ್ದಾರೆ. ಅಲಬಾಮಾ ವಿಶ್ವವಿದ್ಯಾಲಯದ ಬರ್ಮಿಂಗ್ಹ್ಯಾಮ್ (UAB) ಆಸ್ಪತ್ರೆಯಲ್ಲಿ ಹ್ಯಾಚರ್ ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದರು ಎಂದು ಬಿಬಿಸಿ ವರದಿ ಮಾಡಿದೆ.
ನವಜಾತ ಸಹೋದರಿಯರಾದ ರೋಕ್ಸಿ ಮತ್ತು ರೆಬೆಲ್ ಅವರು ಡಿಸೆಂಬರ್ 19 ಮತ್ತು 20 ರಂದು ಜನಿಸಿದರು.
ಇದು ಹೇಗಾಯಿತು?
ಯುಟರಸ್ ಡೈಡೆಲ್ಫಿಸ್ ಎಂಬ ವೈದ್ಯಕೀಯ ಸ್ಥಿತಿಯ ಕಾರಣದಿಂದಾಗಿ ಈ ಡಬಲ್ ಗರ್ಭಧಾರಣೆ ಸಂಭವಿಸಿದೆ. ಇದನ್ನು ಡಬಲ್ ಯುಟೆರಸ್ ಎಂದೂ ಕರೆಯುತ್ತಾರೆ. ಮಹಿಳೆಯ ದೇಹದ 2 ಪ್ರತ್ಯೇಕ ಗರ್ಭಕೋಶದಲ್ಲಿ ಒಟ್ಟಿಗೆ ಶಿಶುಗಳ ಬೆಳವಣಿಗೆಯಾಗುತ್ತದೆ. ಗರ್ಭಧಾರಣೆ ಹಂತದಲ್ಲಿ ಈ ರೀತಿಯ ವಿಘಟನೆ ಉಂಟಾಗಿರುತ್ತದೆ.
ಈ ರೀತಿಯ ಗರ್ಭಕೋಶ ಹೊಂದಿರುವ ಮಹಿಳೆಯರ ಅಂಡೋತ್ಪತ್ತಿ ಮತ್ತು ಮುಟ್ಟಿನ ಚಟುವಟಿಕೆಗಳು ಸಾಮಾನ್ಯ ಮಹಿಳೆಯರಲ್ಲಿ ಇದ್ದಂತೆಯೇ ಇರುತ್ತವೆ.
ಆದರೆ ಅವರು ಫಲವತ್ತತೆ ಮತ್ತು ಗರ್ಭಾವಸ್ಥೆಯಲ್ಲಿ ಸವಾಲುಗಳನ್ನು ಎದುರಿಸಬಹುದು. ಗರ್ಭಾವಸ್ಥೆಯಲ್ಲಿ ತೊಡಕುಗಳು ಉಂಟಾಗಬಹುದು.
17 ವರ್ಷದಲ್ಲೇ ಡಬಲ್ ಗರ್ಭಾಶಯ ಪತ್ತೆ
ಕೆಲ್ಸಿ ಹ್ಯಾಚರ್ 17 ವರ್ಷದವರಿದ್ದಾಗಲೇ ಅವರಿಗೆ ಡಬಲ್ ಗರ್ಭಾಶಯ ಇರುವುದು ಗೊತ್ತಾಗಿತ್ತು. ಪ್ರಸೂತಿ ತಜ್ಞೆ ಶ್ವೇತಾ ಪಟೇಲ್ ಪ್ರಕಾರ ಒಂದು ಗರ್ಭಾಶಯದಲ್ಲಿ ಮಗುವನ್ನು ಹೊಂದುವುದು ಸಾಮಾನ್ಯ. ಆದರೆ ಎರಡು ಗರ್ಭಾಶಯದಲ್ಲಿ ಮಗು ಹೊಂದುವುದು ಅಸಮಾನ್ಯ.
ಇದನ್ನು ಡೈಕ್ಯಾವಿಟರಿ ಗರ್ಭಧಾರಣೆ ಎಂದೂ ಕರೆಯುತ್ತಾರೆ. ಒಂದು ಮಿಲಿಯನ್ ಪೈಕಿ ಒಬ್ಬರಲ್ಲಿ ಇಂತಹ ಸಾಧ್ಯತೆ ಇರುತ್ತದೆ ಎನ್ನುತ್ತಾರೆ. ಅತ್ಯಂತ ಅಪರೂಪದ ಪ್ರಕರಣದಲ್ಲಿ ಕ್ಯಾಚರ್ ಎರಡು ಗರ್ಭಾಶಯದಲ್ಲಿ ಎರಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.