ಕೋವಿಡ್‌ನ ಉಪತಳಿ ಜೆಎನ್.1 (Covid JN.1) ಸೋಂಕು ಪತ್ತೆ ದೇಶದಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 322 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 322 ಕೋವಿಡ್ ಪ್ರಕರಣ ಮತ್ತು ಒಂದು ಕೋವಿಡ್ ಸಂಬಂಧಿತ ಸಾವು ಪ್ರಕರಣ ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,742 ಆಗಿದೆ. 322 ಪ್ರಕರಣಗಳ ಪೈಕಿ ಕೇರಳದಲ್ಲೇ 128 ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕದಲ್ಲಿ 96 ಮತ್ತು ಮಹಾರಾಷ್ಟ್ರದಲ್ಲಿ 35 ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ ಇದೇ ಅವಧಿಯಲ್ಲಿ 16 ಹೊಸ ಪ್ರಕರಣಗಳು ದಾಖಲಾಗಿವೆ.
ಕಳೆದ ಶನಿವಾರ 24 ಗಂಟೆಗಳಲ್ಲಿ ಭಾರತದಲ್ಲಿ ಪತ್ತೆಯಾದ ಹೊಸ ಕೋವಿಡ್ ಪ್ರಕರಣಗಳಲ್ಲಿ ಬಹಳಷ್ಟು ಏರಿಕೆ ಕಂಡುಬಂದಿದೆ. ಕೇರಳದಲ್ಲೇ ಹೆಚ್ಚಿನ ಕೇಸ್ ವರದಿಯಾಗ್ತಿದ್ದು ಒಟ್ಟು 423 ಪ್ರಕರಣಗಳ ಪೈಕಿ 266 ಕೇರಳದಿಂದ ವರದಿಯಾಗಿದ್ದವು. 70 ಪ್ರಕರಣ ಕರ್ನಾಟಕದಿಂದ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ.
ಏತನ್ಮಧ್ಯೆ ಕರೋನ ವೈರಸ್‌ನ ಹೊಸ ರೂಪಾಂತರ ಪತ್ತೆಯಿಂದ ಹೆಚ್ಚುತ್ತಿರುವ ಕಳವಳಗಳ ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಪ್ರಸ್ತುತ ಭಯಪಡುವ ಅಗತ್ಯವಿಲ್ಲ. ಅದಾಗ್ಯೂ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ.