ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, ರೈತರ ಖಾತೆಗೆ ಬರಪರಿಹಾರದ ರೂ. 2,000 ರೂ.ಗಳನ್ನು ಖಾತೆಗೆ ಜಮಾ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, ಭೀಕರ ಬರದಿಂದ ತತ್ತರಿಸಿರುವ ನಾಡಿನ ರೈತರ ನೆರವಿಗೆ ಧಾವಿಸುವ ಉದ್ದೇಶದಿಂದ ಮೊದಲ ಕಂತಿನ ಬರಪರಿಹಾರವಾಗಿ ರೂ. 2,000 ನಮ್ಮ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ಅನುದಾನಕ್ಕೆ ಕಾಯದೆ, ರೈತರ ಹಿತಕಾಪಾಡುವ ಏಕೈಕ ಉದ್ದೇಶದಿಂದ ತಕ್ಷಣದ ನೆರವನ್ನು ಘೋಷಿಸಲಾಗಿದೆ ಎಂದರು.
ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂಬ ವಾಗ್ದಾನವನ್ನು ರಾಷ್ಟ್ರೀಯ ರೈತರ ದಿನದ ಸಂದರ್ಭದಲ್ಲಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಬಾರಿ ರಾಜ್ಯದಲ್ಲಿನ ಒಟ್ಟು 236 ತಾಲೂಕುಗಳ ಪೈಕಿ 223 ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಬರದಿಂದಾಗಿ ರಾಜ್ಯ ಸುಮಾರು 48.19 ಲಕ್ಷ ಹೆಕ್ಟೇರ್ನಷ್ಟು ಬೆಳೆ ನಷ್ಟ ಆಗಿದೆ. ಒಟ್ಟು 33,770.10 ಕೋಟಿ ರೂ. ಬರ ನಷ್ಟ ಅಂದಾಜಿಸಲಾಗಿದೆ. ಈ ಪೈಕಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿ (NDRF) ನಡಿ 18,171.44 ಕೋಟಿ ರೂ. ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೋರಲಾಗಿದೆ ಎಂದರು.