ನವದೆಹಲಿ : ಪಂಜಾಬ್ ಪ್ರಾಂತ್ಯದ ಐಎಸ್ಐ ಕಟ್ಟಡದ ಮೇಲೆ ಮಾರಣಾಂತಿಕ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ಸಂಚುಗಳಲ್ಲಿ ಭಾಗಿಯಾಗಿದ್ದ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನ ಪ್ರಮುಖ ಕಮಾಂಡರ್ನನ್ನು ಪಾಕಿಸ್ತಾನ ಭದ್ರತಾ ಪಡೆಗಳು ಶನಿವಾರ ಹತ್ಯೆಗೈದಿವೆ.
ಪ್ರಾಂತೀಯ ರಾಜಧಾನಿ ಲಾಹೋರ್ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಚಿನಿಯೋಟ್ ಪ್ರದೇಶದಲ್ಲಿ ಕೆಲವು ಭಯೋತ್ಪಾದಕರು ಅಡಗಿದ್ದಾರೆ ಎಂಬ ಸುಳಿವು ಸಿಕ್ಕಿದೆ ಎಂದು ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಹೇಳಿಕೆಯಲ್ಲಿ ತಿಳಿಸಿದೆ.
ಪೊಲೀಸರು ಅಡಗುತಾಣವನ್ನು ಸುತ್ತುವರೆದಾಗ ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿದರು. ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸಿಟಿಡಿ ತಿಳಿಸಿದೆ.
ಭಯೋತ್ಪಾದಕರಲ್ಲಿ ಒಬ್ಬನನ್ನು ಘಜನ್ಫರ್ ನದೀಮ್ ಅಲಿಯಾಸ್ ಖಾಲಿದ್ ಹಬೀಬ್ ಎಂದು ಗುರುತಿಸಲಾಗಿದ್ದು.ಲಾಹೋರ್ನಿಂದ 130 ಕಿ.ಮೀ ದೂರದಲ್ಲಿರುವ ಫೈಸಲಾಬಾದ್ ನಗರದ ಐಎಸ್ಐ ಕಟ್ಟಡದ ಮೇಲೆ ನಡೆದ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ನದೀಮ್ ಎಂದು ಅದು ಹೇಳಿದೆ.
2011ರಲ್ಲಿ ಫೈಸಲಾಬಾದ್ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್ಐ) ಕಟ್ಟಡದ ಹೊರಗೆ ಕಾರಿನಲ್ಲಿ ಬಂದ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡು 25 ಜನರು ಸಾವನ್ನಪ್ಪಿದ್ದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.