ಉಪ ರಾಷ್ಟ್ರಪತಿ, ರಾಜ್ಯಸಭೆ ಸಭಾಪತಿ ಜಗದೀಪ್ ಧನ್ ಕರ್ ಅವರನ್ನು ಮಿಮಿಕ್ರಿ ಮಾಡಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ಅದನ್ನು ಚಿತ್ರೀಕರಿಸುತ್ತಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸ್ತಿದೆ. ಇದರ ನಡುವೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಧಾನಿ ಮೋದಿ 2017 ರಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಅಪಹಾಸ್ಯ ಮಾಡಿದ ವಿಡಿಯೋ ಹರಿಬಿಟ್ಟು ತಿರುಗೇಟು ನೀಡಿದ್ದಾರೆ.
ಟ್ವಿಟರ್ ನಲ್ಲಿ ಹಳೆಯ ವಿಡಿಯೋ ಹಂಚಿಕೊಂಡು, “ಪ್ರಧಾನಿ ಮೋದಿ, ಹಮೀದ್ ಅನ್ಸಾರಿ ಅವರನ್ನು ಜಾತಿಯ ಆಧಾರದ ಮೇಲೆ ಗುರುತಿಸಿದರು. ಅನ್ಸಾರಿ ಅವರ ಸಂಪೂರ್ಣ ವೃತ್ತಿಪರ ಮತ್ತು ರಾಜಕೀಯ ಸಾಧನೆಗಳು ಅವರ ಧರ್ಮದ ಕಾರಣದಿಂದ ಗುರುತಿಸಲ್ಪಟ್ಟವು ಎಂಬ ರೀತಿ ಮಾತನಾಡಿದರು” ಎಂದು ಆರೋಪಿಸಿದ್ದಾರೆ.
2017 ರಲ್ಲಿ ಹಮೀದ್ ಅನ್ಸಾರಿ ಅವರ ಬೀಳ್ಕೊಡುಗೆ ವೇಳೆ ಪ್ರಧಾನಿ ಮೋದಿ ಅಪಹಾಸ್ಯ ಮಾಡಿದ್ದನ್ನ ಬೊಟ್ಟು ಮಾಡಿರುವ ಜೈ ರಾಮ್ ರಮೇಶ್, “ಜಗದೀಪ್ ಧನ್ ಕರ್ ಅವರನ್ನು ಅನುಕರಿಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ವಿರುದ್ಧದ ವಾಗ್ದಾಳಿ, ಸಂಸತ್ತಿನಿಂದ 144 ಸಂಸದರನ್ನು ಅಮಾನತುಗೊಳಿಸಿರುವ ಮತ್ತು ಡಿಸೆಂಬರ್ 13 ರಂದು ಸಂಸತ್ತಿನಲ್ಲಿ ನಡೆದ ಭದ್ರತಾ ಉಲ್ಲಂಘನೆ ಪ್ರಕರಣಗಳನ್ನು ಬೇರೆಡೆ ಸೆಳೆಯುವ ಸಂಪೂರ್ಣ ಪ್ರಯತ್ನವಾಗಿದೆ” ಎಂದು ರಮೇಶ್ ಹೇಳಿದರು.
ಕಳೆದ ಮಂಗಳವಾರ ಸಂಸತ್ತಿನಲ್ಲಿ ಜಗದೀಪ್ ಧನ್ ಕರ್ ಅವರು ತಮ್ಮನ್ನು ಮಿಮಿಕ್ರಿ ಮಾಡಿದ ಟಿಎಂಸಿ ಸಂಸದ ಮತ್ತು ರಾಹುಲ್ ಗಾಂಧಿಯನ್ನು ಟೀಕಿಸಿ ಬೇಸರ ವ್ಯಕ್ತಪಡಿಸಿದ್ದರು. ಗಮನಾರ್ಹವೆಂದರೆ, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.