ಬೆಂಗಳೂರು : ಹಿಂದುಳಿದ ವರ್ಗದ ಪಿ.ಹೆಚ್.ಡಿ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ , ಸರ್ಕಾರದಿಂದ ವ್ಯಾಸಂಗ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪೂರ್ಣಾವಧಿ ಪಿಹೆಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10.01.2024 ಆಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು
1. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಸೌಲಭ್ಯವನ್ನು ಪಡೆಯಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. 2. 2023-24ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್.ಡಿ ಅಧ್ಯಯನ ಪ್ರಾರಂಭಿಸಿರಬೇಕು (ದಿನಾಂಕ:30.01.2023 ಮತ್ತು ಅದರ ನಂತರ ಪ್ರಥಮ ವರ್ಷದಪಿಎಚ್.ಡಿ ಪ್ರಾರಂಭಿಸಿರಬೇಕು).
3. ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಮಾಸಿಕ ರೂ.10,000/- ದಂತೆ ಗರಿಷ್ಠ 3 ವರ್ಷಗಳ ಅವಧಿಗೆ ವ್ಯಾಸಂಗ ವೇತನ/ಫೆಲೋಶಿಪ್ ಅನ್ನು ಪ್ರವರ್ಗವಾರು, ಮೀಸಲಾತಿ, ಮೆರಿಟ್ ಹಾಗೂ ಅನುದಾನ ಲಭ್ಯತೆಗೆ ಅನುಗುಣವಾಗಿ ಹಾಗೂ ನಿಯಮಾನುಸಾರ ಅರ್ಹ ಅಭ್ಯರ್ಥಿಗಳಿಗೆ ನೀಡಲಾಗುವುದು.
4. ನಿಗದಿಪಡಿಸಿರುವ ಅರ್ಹತೆಗಳು:
(a) ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
(b) ಕರ್ನಾಟಕ ಸರ್ಕಾರದ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿರಬೇಕು.
(c) ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ಅಧೀನಕ್ಕೆ ಒಳಪಡುವ ಹಾಗೂ ಕರ್ನಾಟಕದಲ್ಲಿರುವ ಸಂಸ್ಥೆಗಳಲ್ಲಿ ಪೂರ್ಣಾವಧಿ (Full Time) ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರಬೇಕು.
(d) ಈ ಸೌಲಭ್ಯವನ್ನು ಪಡೆಯಲಿಚ್ಛಿಸುವ ಅಭ್ಯರ್ಥಿಯು ಭಾರತ ಸರ್ಕಾರ/ಕರ್ನಾಟಕ ಸರ್ಕಾರ/ ವಿಶ್ವವಿದ್ಯಾಲಯ ಅಥವಾ ಇತರೆ ಯಾವುದೇ ಸಂಸ್ಥೆಗಳಿಂದ ಮಾಸಿಕ ವ್ಯಾಸಂಗ ವೇತನ/ ಫೆಲೋಶಿಪ್ ಗೆ ಆಯ್ಕೆಯಾಗಿರಬಾರದು ಹಾಗೂ ಫೆಲೋಶಿಪ್ ಪಡೆದಿರಬಾರದು/ಪಡೆಯಬಾರದು. ಒಂದು ಬಾರಿ ಈ ಇಲಾಖೆಯಿಂದ ಫೆಲೋಶಿಪ್ ಗೆ ಆಯ್ಕೆಯಾದ ನಂತರ ಯಾವುದೇ ಕಾರಣದಿಂದ ಬೇರೆ ಫೆಲೋಶಿಪ್ ಗೆ ಆಯ್ಕೆ ಬಯಸಿ ಅರ್ಜಿ ಸಲ್ಲಿಸುವಂತಿಲ್ಲ. ಹಾಗೂ ಪಿಎಚ್.ಡಿ ಅಧ್ಯಯನವನ್ನು ಅರ್ಧಕ್ಕೆ ಮೊಟಕುಗೊಳಿಸುವಂತಿಲ್ಲ. ಒಂದು ವೇಳೆ ಬೇರೆ ಫೆಲೋಶಿಪ್ ಗೆ ಆಯ್ಕೆಯಾದಲ್ಲಿ ಅಥವಾ ಪಿಎಚ್.ಡಿ ಅಧ್ಯಯನವನ್ನು ಅರ್ಧಕ್ಕೆ ಮೊಟಕುಗೊಳಿಸಿದಲ್ಲಿ ಅಂತಹ ಅಭ್ಯರ್ಥಿಯು ಇಲಾಖೆಯಿಂದ ಪಡೆದಿರುವ ಎಲ್ಲಾ ವ್ಯಾಸಂಗ ವೇತನ/ಫೆಲೋಶಿಪ್ ಅನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕಾಗುತ್ತದೆ.