ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು 2023 ರಲ್ಲಿ ತಮ್ಮ ಸಂಪತ್ತನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಇದರಲ್ಲಿ ದೇಶದ ಅತ್ಯಂತ ಶ್ರೀಮಂತರಾದ ಮುಖೇಶ್ ಅಂಬಾನಿ, ಗೌತಮ್ ಅದಾನಿಯವರನ್ನೂ ಹಿಂದಿಕ್ಕಿದ್ದಾರೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಬಹಿರಂಗಪಡಿಸಿದ ವರದಿ ಪ್ರಕಾರ 2023 ರಲ್ಲಿ ಸಾವಿತ್ರಿ ಜಿಂದಾಲ್ ಅವರ ಸಂಪತ್ತು 9.6 ಬಿಲಿಯನ್ ಡಾಲರ್ (79ಸಾವಿರ ಕೋಟಿ ರೂ. ) ಹೆಚ್ಚಾಗಿದೆ. ಈ ಮೂಲಕ ಸಾವಿತ್ರಿ ಜಿಂದಾಲ್ ಅವರ ಸಂಪತ್ತಿನ ದಾಖಲೆಯ ಏರಿಕೆಯು ಅವರನ್ನು ಭಾರತದ ಐದನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದೆ. ಜಿಂದಾಲ್ ಅವರ ಸಂಪತ್ತಿಗೆ ಹೋಲಿಸಿದರೆ ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು ಸುಮಾರು 5 ಬಿಲಿಯನ್ ಡಾಲರ್ ಹೆಚ್ಚಾಗಿದೆ.
ಸಾವಿತ್ರಿ ಜಿಂದಾಲ್ ಆವರ ಸಂಪತ್ತಿನ ಒಟ್ಟು ನಿವ್ವಳ ಮೌಲ್ಯವು 25 ಬಿಲಿಯನ್ ಡಾಲರ್ ಆಗಿದೆ. 24 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿರುವ ವಿಪ್ರೋನ ಅಜೀಂ ಪ್ರೇಮ್ ಜಿ ನಂತರದ ಅಂದರೆ 6ನೇ ಸ್ಥಾನದಲ್ಲಿದ್ದಾರೆ.
ಸಾವಿತ್ರಿ ಜಿಂದಾಲ್ ಓಪಿ ಜಿಂದಾಲ್ ಗ್ರೂಪ್ನ ಅಧ್ಯಕ್ಷರಾಗಿದ್ದಾರೆ, ಇದು ಉಕ್ಕಿನ ಉದ್ಯಮದ ಸಮೂಹವಾಗಿದೆ. ಸಾವಿತ್ರಿ ಜಿಂದಾಲ್ ಅವರ ದಿವಂಗತ ಪತಿ ಓಂ ಪ್ರಕಾಶ್ ಜಿಂದಾಲ್ ಅವರು ಈ ವ್ಯವಹಾರವನ್ನು ಪ್ರಾರಂಭಿಸಿದರು. ಜಿಂದಾಲ್ ಗ್ರೂಪ್ ಜೆಎಸ್ ಸ್ಟೀಲ್, ಜಿಂದಾಲ್ ಸ್ಟೀಲ್ & ಪವರ್, ಜೆಎಸ್ ಎನರ್ಜಿ, ಜಿಂದಾಲ್ ಹೋಲ್ಡಿಂಗ್ಸ್, ಜೆಎಸ್ ಮತ್ತು ಜಿಂದಾಲ್ ಸ್ಟೇನ್ಲೆಸ್ನಂತಹ ಉಕ್ಕಿನ ಉದ್ಯಮಗಳನ್ನು ಸಾವಿತ್ರಿಯವರ ಜಿಂದಾಲ್ ಗ್ರೂಪ್ ಹೊಂದಿದೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಪ್ರಕಾರ, ಸಾವಿತ್ರಿ ಜಿಂದಾಲ್ ನಂತರದ ಸ್ಥಾನದಲ್ಲಿರುವ ಎಚ್ಸಿಎಲ್ ಟೆಕ್ನಾಲಜೀಸ್ನ ಸಂಸ್ಥಾಪಕ ಮತ್ತು ಅಧ್ಯಕ್ಷ ಶಿವ ನಾಡಾರ್ ಸಂಪತ್ತು 2023 ರಲ್ಲಿ 8 ಬಿಲಿಯನ್ ಡಾಲರ್ಗಳಷ್ಟು ಏರಿಕೆ ಕಂಡಿದೆ. ನಂತರದ ಸ್ಥಾನದಲ್ಲಿ 7 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಏರಿಕೆಯೊಂದಿಗೆ ಡಿಎಲ್ ಎಫ್ ನ ಕೆಪಿ ಸಿಂಗ್ ಇದ್ದಾರೆ.
ಶಾಪೂರ್ಜಿ ಪಲ್ಲೊಂಜಿ ಗ್ರೂಪ್ನ ಶಾಪೂರ್ ಮಿಸ್ತ್ರಿ ಜೊತೆಗೆ ಆದಿತ್ಯ ಬಿರ್ಲಾ ಗ್ರೂಪ್ನ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಸಂಪತ್ತು 6.5 ಬಿಲಿಯನ್ ಡಾಲರ್ ಏರಿಕೆ ಕಂಡಿದೆ.
ಸುನಿಲ್ ಮಿತ್ತಲ್, ಎಂಪಿ ಲೋಧಾ, ರವಿ ಜೈಪುರಿಯಾ ಮತ್ತು ದಿಲೀಪ್ ಶಾಂಘ್ವಿ ಸೇರಿದಂತೆ ಹಲವು ಭಾರತೀಯ ಕೈಗಾರಿಕೋದ್ಯಮಿಗಳ ಸಂಪತ್ತು ಏರಿಕೆಯಾಗಿದೆ.
ಕಳೆದ ಒಂದು ವರ್ಷದಲ್ಲಿ ಉದ್ಯಮಿ ಗೌತಮ್ ಅದಾನಿ ಅವರ ಆಸ್ತಿ ಇಳಿಕೆ ಕಂಡಿದೆ. ಅವರ ಸಂಪತ್ತಿನ ನಿವ್ವಳ ಮೌಲ್ಯವು 35.4 ಬಿಲಿಯನ್ ಡಾಲರ್ ಕುಸಿತವಾಗಿದ್ದು 85.1 ಬಿಲಿಯನ್ ಡಾಲರ್ ತಲುಪಿದೆ. ಅದಾಗ್ಯೂ ಅವರು ಭಾರತದ 2ನೇ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದಲ ಸ್ಥಾನದಲ್ಲಿರುವ ಮುಖೇಶ್ ಅಂಬಾನಿಯವರ ನಿವ್ವಳ ಆಸ್ತಿ ಮೌಲ್ಯ 99.2 ಬಿಲಿಯನ್ ಡಾಲರ್ ಇದೆ.