![](https://kannadadunia.com/wp-content/uploads/2023/08/court-court.png)
ಧಾರವಾಡ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ತಾಲ್ಲೂಕಿನ ಹೊಸಳ್ಳಿ ಗ್ರಾಮದ ದೂರುದಾರ ಮಂಜುನಾಥ ಕಾಂಬಳೆ ಅನ್ನುವವರ ಹೆಸರಿನಲ್ಲಿ ದಿ:26/03/1999 ರಂದು ಐದು ಸಾವಿರ ರೂಪಾಯಿ ಹಣವನ್ನು ಆಗಿನ ಧಾರವಾಡದ ದೇನಾ ಬ್ಯಾಂಕಿನಲ್ಲಿ ಖಾಯಂ ಠೇವಣಿ ಇಟ್ಟಿದ್ದರು.
ಸದರಿ ದೇನಾ ಬ್ಯಾಂಕ ನಂತರ ಬ್ಯಾಂಕ್‍ಆಪ್ ಬರೋಡಾದಲ್ಲಿ ವಿಲೀನವಾಗಿತ್ತು. ಅದರ ಮೇಲೆ ಶೆ.10.5 ರಂತೆ ಬಡ್ಡಿಕೊಡಲು ಒಪ್ಪಂದವಿತ್ತು. ದಿ:26/03/2010 ಕ್ಕೆ ಆ ಠೇವಣಿ ಅವದಿ ಮುಗಿಯುತ್ತಿತ್ತು. ಮುಕ್ತಾಯದ ಮೌಲ್ಯ ರೂ.15,635/- ಆಗಿತ್ತು. ಠೇವಣಿ ಅವದಿ 2010 ರಲ್ಲೇ ಮುಗಿದರೂ ನಂತರ ಆ ಹಣವನ್ನು ಎದುರುದಾರ ಬ್ಯಾಂಕಿನವರು ದೂರುದಾರರಿಗೆ ವಾಪಸ್ಸು ಕೊಟ್ಟಿರಲಿಲ್ಲ. ದೂರುದಾರ ಸ್ವತ: ಮತ್ತು ವಕೀಲರ ಮೂಲಕ ಎದುರುದಾರ ಬ್ಯಾಂಕ್ ಆಪ್ ಬರೋಡಾಗೆ ಠೇವಣಿ ಹಣ ಮತ್ತು ಬಡ್ಡಿ ಹಿಂದಿರುಗಿಸಲು ವಿನಂತಿಸಿದರೂ ಏನೂ ಪ್ರಯೋಜನ ಆಗಿರಲಿಲ್ಲ. ಎದುರುದಾರ ಬ್ಯಾಂಕಿನವರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಸದರಿ ಬ್ಯಾಂಕಿನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ದಿ:16/05/2023 ರಂದು ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ .ಅ. ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಠೇವಣಿ ಅವಧಿ 2010 ರಲ್ಲೇ ಮುಗಿದಿದ್ದು ಈಗ ಸುಮಾರು 13 ವರ್ಷ ಕಳೆದಿದೆ. ಈವರೆಗೆ ದೂರುದಾರರಿಗೆ ಠೇವಣಿ ಮುಕ್ತಾಯದ ಹಣ ಮತ್ತು ಅದರ ಮೇಲಿನ ಬಡ್ಡಿ ಎದುರುದಾರ ಬ್ಯಾಂಕಿನವರು ಕೊಡದೇ ಇರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರರ ಠೇವಣಿ ಹಣ ರೂ.15,635/- ಮತ್ತು ಅದರ ಮೇಲೆ 30/11/2023ರ ವರೆಗಿನ ಬಡ್ಡಿ ರೂ.22,299/- ಸೇರಿ ಒಟ್ಟು ರೂ.37,934/- ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ಧಾರವಾಡದ ಬ್ಯಾಂಕ್ ಆಪ್ ಬರೋಡಾದ ಶಾಖೆಗೆ ಆಯೋಗ ನಿರ್ದೇಶಿಸಿದೆ. ಈ ಬಗ್ಗೆ ಎದುರುದಾರರ ನಿರ್ಲಕ್ಷದ ಧೋರಣೆ ಮತ್ತು ಅದರಿಂದ ದೂರುದಾರರಿಗೆ ಆಗಿರುವ ಹಾಗೂ ತೊಂದರೆಗಾಗಿ ಎದುರುದಾರ ಬ್ಯಾಂಕಿನವರು ರೂ. 50,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಆದೇಶಿಸಿದೆ.