
ನವದೆಹಲಿ: ಸಿಟಿಜನ್ ಫೈನಾನ್ಷಿಯಲ್ ಸೈಬರ್ ವಂಚನೆಗಳ ವರದಿ ಮತ್ತು ನಿರ್ವಹಣಾ ವ್ಯವಸ್ಥೆ'(CFCFRMS) ನಲ್ಲಿ ಈ ವರ್ಷ ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಹಣಕಾಸಿನ ವಂಚನೆ ಪ್ರಕರಣಗಳು ದಾಖಲಾಗಿವೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಈ ವಿಷಯ ತಿಳಿಸಿದ್ದಾರೆ. 2021 ರಲ್ಲಿ CFCFRMS ಪ್ರಾರಂಭವಾದಾಗಿನಿಂದ 4 ಲಕ್ಷಕ್ಕೂ ಹೆಚ್ಚು ಘಟನೆಗಳಲ್ಲಿ 1 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಉಳಿಸಲಾಗಿದೆ ಎಂದು ಹೇಳಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳ ಮೇಲೆ ವಿಶೇಷ ಗಮನಹರಿಸುವುದರೊಂದಿಗೆ ಎಲ್ಲಾ ರೀತಿಯ ಸೈಬರ್ ಅಪರಾಧ ಘಟನೆಗಳ ಆನ್‌ಲೈನ್ ವರದಿಗಾಗಿ ನಾಗರಿಕರಿಗೆ ಕೇಂದ್ರೀಕೃತ ಕಾರ್ಯವಿಧಾನವನ್ನು ಒದಗಿಸಲು ಸಚಿವಾಲಯವು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಅನ್ನು ಕಾರ್ಯಗತಗೊಳಿಸಿದೆ. ಆನ್‌ಲೈನ್ ಸೈಬರ್ ಘಟನೆಗಳಿಗೆ ನೆರವು ಪಡೆಯಲು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1930 ಅನ್ನು ಕಾರ್ಯಗತಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.