
ಚಿಕ್ಕಬಳ್ಳಾಪುರ: ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ(ಕೋಚಿಮುಲ್)ನಲ್ಲಿ ನಡೆಯುತ್ತಿರುವ ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿದೆ. ರಾಜ್ಯ ಸರ್ಕಾರ ತನಿಖೆಗೆ ಆದೇಶದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಕೋಚಿಮುಲ್ ನೇಮಕಾತಿಯಲ್ಲಿ ಭಾರಿ ಅಕ್ರಮ ವಾಸನೆ ಸುಳಿದಿದೆ. ಕೆಲವು ಶಾಸಕರು, ಮಾಜಿ ಸಚಿವರ ಹೆಸರಲ್ಲಿ ಶಿಫಾರಸ್ಸು ಪತ್ರಗಳು ಹರಿದಾಡುತ್ತಿವೆ ಎಂದು ಹೇಳಿದ್ದಾರೆ. ಇಡೀ ನೇಮಕಾತಿ ಪ್ರಕ್ರಿಯೆ ದೊಡ್ಡ ಹಗರಣವಾಗಿರುವುದು ಸ್ಪಷ್ಟವಾಗಿದ್ದು, ಪ್ರಾಮಾಣಿಕ, ಪ್ರತಿಭಾವಂತ ಉದ್ಯೋಗ ಆಕಾಂಕ್ಷಿಗಳ ಹಿತದೃಷ್ಟಿಯಿಂದ ನೇಮಕಾತಿ ರದ್ದುಪಡಿಸಿ ತನಿಖೆಗೆ ಆದೇಶಿಸಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ, ಜಾಲತಾಣದಲ್ಲಿ ಹರಿದಾಡಿರುವುದು ನಕಲಿ ಪಟ್ಟಿಯಾಗಿದೆ. ಇಂತಹ ನಕಲಿ ಪಟ್ಟಿ ಹರಿಬಿಟ್ಟವರ ವಿರುದ್ಧ ತನಿಖೆ ಕೈಗೊಳ್ಳಲಾಗುವುದು. ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇದುವರೆಗೂ ಒಕ್ಕೂಟ ಪಟ್ಟಿ ಬಿಡುಗಡೆ ಮಾಡಿಲ್ಲ. ತಪ್ಪು ಮಾಹಿತಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.