ಬೀದರ್: ಬೀದರ್ ನ ಖಾಸಗಿ ಶಾಲೆಯಲ್ಲಿ ನಡೆದಿದ್ದ ಅಮಾನುಷ ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನನ್ನು ಬಂಧಿಸಲಾಗಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಶಿಕ್ಷಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ವಿದ್ಯಾರ್ಥಿಗಳು ಕ್ಲಾಸ್ ರೂಂ ನಲ್ಲಿ ಗಲಾಟೆ ಮಾಡಿದ್ದಾರೆ ಎಂದು ನೆಪವೊಡ್ಡಿ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಮೇಲೆ ಶಿಕ್ಷಕ ರಮೇಶ್ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಮಕ್ಕಳು ಗಲಾಟೆ ಮಾಡಿದ್ದಾರೆ ಎಂದು ಅವರ ಬಟ್ಟೆ ಬಿಚ್ಚಿಸಿ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ವಿಷಯ ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡಲ್ಲ ಎಂದು ದೈಹಿಕ ಶಿಕ್ಷಕ ರಮೇಶ್ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿತ್ತು.
ಮಕ್ಕಳಿಗೆ ಆದ ಗಾಯವನ್ನು ಗಮನಿಸಿದ ಪೋಷಕರು ವಿಚಾರಿಸಿದಾಗ ಮಕ್ಕಳು ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ಹುಮ್ನಾಬಾದ್ ಠಾಣೆಯಲ್ಲಿ ಶಿಕ್ಷಕ ರಮೇಶ್ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಶಿಕ್ಷಕ ರಮೇಶ್ ನನ್ನು ಬಂಧಿಸಿದ್ದಾರೆ.