ರ್ಯಾಪಿಡೋ ಬೈಕ್ ಸವಾರ, ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಯುವತಿ ರೆಡ್ಟಿಟ್ ಪ್ರೊಫೈಲ್ ನಲ್ಲಿ ಘಟನೆಯನ್ನು ವಿವರಿಸಿ ಬೇಸರ ಮತ್ತು ಆತಂಕ ಹೊರಹಾಕಿದ್ದಾರೆ. ಬೆಂಗಳೂರು ನಿವಾಸಿ ಯುವತಿಯೊಬ್ಬರು ಕಳೆದ ಶನಿವಾರ ರಾತ್ರಿ 8:30 ರ ಸುಮಾರಿಗೆ ರಾಪಿಡೋ ಬೈಕ್ ಅನ್ನು ಬುಕ್ ಮಾಡಿ ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ಪ್ರಯಾಣಿಸುತ್ತಿದ್ದರು.
ಆರಂಭದಲ್ಲಿ ತನ್ನ ಫೋನ್ ಬ್ಯಾಟರಿ ಖಾಲಿಯಾಗಿದೆ ಎಂದು ಯುವತಿಯ ಫೋನ್ ಪಡೆದ ಚಾಲಕ ಅದನ್ನ ಸ್ಟ್ಯಾಂಡ್ ನಲ್ಲಿರಿಸಿ ಗೂಗಲ್ ಮ್ಯಾಪ್ ನೋಡಿಕೊಂಡು ಬೈಕ್ ಚಲಾಯಿಸಿದ್ದಾನೆ. ಬಳಿಕ ಆತ ಯುವತಿಯ ಬಳಿ ನೀವು ಎಲ್ಲಿಂದ ಬಂದಿದ್ದೀರಿ? ನಿಮ್ಮ ಮನೆಯಲ್ಲಿ ಯಾರ್ಯಾರಿದ್ದಾರೆ ಎಂದೆಲ್ಲಾ ವೈಯಕ್ತಿಕ ಪ್ರಶ್ನೆ ಕೇಳಿ ವಿಚಾರಿಸಿದ್ದಾನೆ. ಕೆಲ ಡ್ರೈವರ್ ಗಳು ವಾಚಾಳಿಗಳಾಗಿದ್ದು ಇವರು ಅಂಥವರೇ ಆಗಿರಬೇಕೆಂದು ಯುವತಿ, ಚಾಲಕ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ನಂತರ ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್ ಹಾಕಿಸಲು ಬೈಕ್ ನಿಲ್ಲಿಸಿದಾಗ ಪರಿಸ್ಥಿತಿಯು ಕರಾಳ ತಿರುವು ಪಡೆದುಕೊಂಡಿತು. ಚಾಲಕ ಹಿಂದಿನ ಸೀಟ್ ನಿಂದ ಕೀ ತೆಗೆದುಕೊಳ್ಳುವಾಗ ಆಕೆಯ ತೊಡೆಯನ್ನ ಎರಡು ಬಾರಿ ಸ್ಪರ್ಶಿಸಿದ್ದಾನೆ. ಸ್ವಲ್ಪ ಸಮಯದ ನಂತರ ಅವನು ಮಹಿಳೆಯ ತೊಡೆಗಳ ಮೇಲೆ ಕುಳಿತಿದ್ದಾನೆ. ಈ ವೇಳೆ ಯುವತಿಗೆ ತುಂಬಾ ನೋವಾಗಿದೆ. ತುಂಬಾ ಹೆದರಿದ್ದ ನಾನು ಆತ ಏನು ಮಾಡುತ್ತಿದ್ದಾನೆಂದು ಕೇಳಲು ಸಹ ಭಯಗೊಂಡೆ. ಜನನಿಬಿಡ ಪ್ರದೇಶವನ್ನು ತಲುಪುವವರೆಗೆ ಇದು ಸುಮಾರು 20 ನಿಮಿಷಗಳ ಕಾಲ ನಡೆಯಿತು. ಇದರಿಂದ ನಾನು ದುಃಖಿತಳಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.
ಚಾಲಕನ ಉದ್ದೇಶಪೂರ್ವಕ ದುಷ್ಕೃತ್ಯವನ್ನು ಪ್ರಶ್ನಿಸಲು ಧೈರ್ಯ ಮಾಡದ ಯುವತಿ ಮನೆ ತಲುಪಿದರೆ ಸಾಕು ಎಂದು ಮೌನವಾಗೇ ಪ್ರಾರ್ಥಿಸಿದ್ದರಂತೆ.
ನಂತರ ನಾವು ಈಜಿಪುರದ ಬಳಿಗೆ ಬಂದ ವೇಳೆ ಟ್ರಾಫಿಕ್ ಇತ್ತು. ಈ ವೇಳೆ ಆತನ ಕಿರುಕುಳ ಇನ್ನೂ ಹೆಚ್ಚಾಗತೊಡಗಿತು. ನಾನು ತಲುಪಬೇಕಾದ ಸ್ಥಳ ಇನ್ನು 3 ಕಿಲೋಮೀಟರ್ ದೂರದಲ್ಲಿದ್ದರಿಂದ ನಾನು ಸಹಿಸಿಕೊಂಡು ಸುಮ್ಮನೆ ಕುಳಿತೆ. ಬಳಿಕ ತಾವು ಇಳಿಯಬೇಕಾದ ಸ್ಥಳ ಬಂದಾಗ ನಾನು ನನ್ನ ಮೊಬೈಲ್ ಪಡೆದು ಇಳಿದುಹೋದೆ ಎಂದು ಯುವತಿ ವಿವರಿಸಿದ್ದಾರೆ.
ಬಳಿಕ ಯುವತಿ ಈ ಅಹಿತಕರ ಘಟನೆಯನ್ನ ರ್ಯಾಪಿಡೋ ಕಸ್ಟಮರ್ ಕೇರ್ ಗೆ ವರದಿ ಮಾಡಿದ್ದಾರೆ. ಇಲ್ಲಿಂದ ಬಂದ ಪ್ರತಿಕ್ರಿಯೆ ಆಕೆಗೆ ತೃಪ್ತಿಕರವಾಗಿಲ್ಲ. ಈ ಬಗ್ಗೆ ಪರಿಶೀಲಿಸಿ , ಕ್ರಮ ಕೈಗೊಳ್ಳುತ್ತೇವೆ. ಸಂಬಂಧಪಟ್ಟ ಚಾಲಕನನ್ನು ಪತ್ತೆ ಹಚ್ಚಿ ಪರಿಶೀಲಿಸೋದಾಗಿ ಅವರು ಉತ್ತರಿಸಿದ್ದು ನನಗೆ ಸಮಂಜಸವೆನಿಸಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಈ ಘಟನೆ ಬಗ್ಗೆ ಸಾರ್ವಜನಿಕರು ಆಘಾತ ವ್ಯಕ್ತಪಡಿಸಿದ್ದಾರೆ.