ಕೋಲಾರ: ವಸತಿ ಶಾಲೆ ಮಕ್ಕಳನ್ನು ಶೌಚಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯ ಇಬ್ಬರು ಶಿಕ್ಷಕರನ್ನು ಅರೆಸ್ಟ್ ಮಾಡಲಾಗಿದೆ. ಆದರೆ ಶಿಕ್ಷಕರ ಬಂಧನ ಖಂಡಿಸಿ ವಿದ್ಯಾರ್ಥಿಗಳೇ ಪ್ರತಿಭಟನೆ ನಡೆಸಿದ್ದಾರೆ.
ಮೊರಾರ್ಜಿ ದೇಸಾಯಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಬಂಧನ ಖಂಡಿಸಿ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸಿದ್ದು, ಮುನಿಯಪ್ಪ ವಿರುದ್ಧದ ಪ್ರಕರಣ ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ತಕ್ಷಣ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಇಲ್ಲವಾದಲ್ಲಿ ಊಟ-ತಿಂಡಿ ಬಿಟ್ಟು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಶೌಚದ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸುತ್ತಿದ್ದ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಅಲ್ಲದೇ ಶಿಕ್ಷಕರು ಮಕ್ಕಳನ್ನು ಹೊಡೆಯುತ್ತಿರುವ, ಹಿಂಸಿಸುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಈ ಪ್ರಕರಣ ಸಂಬಂಧ ವಸತಿ ಶಾಲೆಯ ಪ್ರಾಂಶುಪಾಲೆ ಸೇರಿ ನಾಲ್ವರು ಸಿಬ್ಬಂಧಿಗಳನ್ನು ಅಮಾತನು ಮಾಡಲಾಗಿತ್ತು. ಅಲ್ಲದೇ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿತ್ತು. ಇದೀಗ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಬಂಧನ ವಿರೋಧಿಸಿ ವಿದ್ಯಾರಿಗಳೇ ಪ್ರತಿಭಟನೆ ನಡೆಸಿದ್ದಾರೆ.