ಬೆಂಗಳೂರು : ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಆತಂಕ ಮೂಡಿಸಿರುವ ಕೋವಿಡ್-19 ವೈರಾಣುವಿನ ಹೊಸ ರೂಪಾಂತರಿ ‘ಜೆಎನ್.1’ (ಒಮಿಕ್ರಾನ್ ಉಪತಳಿ) ಕೇರಳದ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದೆ. ಅಲ್ಲದೇ ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ.
ಈ ಹಿನ್ನೆಲೆ ಕರ್ನಾಟಕದಲ್ಲಿ ಆತಂಕ ಶುರುವಾಗಿದ್ದು, ಈಗಿನಿಂದಲೇ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಗೆ ಟಫ್ ರೂಲ್ಸ್ ತರಲು ಸರ್ಕಾರ ಚಿಂತಿಸಿದೆ ಎನ್ನಲಾಗಿದೆ.
ಇಂದು ಸರ್ಕಾರ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಲಿದ್ದು, ಸಭೆಯಲ್ಲಿ ಸಮಿತಿ ನೀಡುವ ಸಲಗೆ ಮೇರೆಗೆ ಟಫ್ ರೂಲ್ಸ್ ಜಾರಿಗೆ ತರುವ ಬಗ್ಗೆ ನಿರ್ಧರಿಸಲಾಗುತ್ತದೆ. ಕ್ರಿಸ್ ಮಸ್, ಹೊಸವರ್ಷಾಚರಣೆಗೆ ಕೆಲವು ಟಫ್ ರೂಲ್ಸ್ ಜಾರಿಗೆ ಬರುವ ಸಾಧ್ಯತೆಯಿದೆ.
ಕೇರಳದಲ್ಲಿ ಹೊಸ ತಳಿ ಕೋವಿಡ್ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಚ್ಚರಿಕೆ ವಹಿಸಲಾಗುತ್ತಿದೆ. ರಾಜ್ಯದಲ್ಲಿ ಸಾಂಕ್ರಾಮಿಕ ಹರಡುವ ಸಾಧ್ಯತೆ ಇರುವುದರಿಂದ ಸಿದ್ಧತೆಯನ್ನು ಪರಿಶೀಲಿಸಲು ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲು ಸರ್ಕಾರ ನಿರ್ಧರಿಸಿದೆ.
ದೇಶದಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 1,492ಕ್ಕೆ ಏರಿಕೆಯಾಗಿದೆ.ಕೋಯಿಕ್ಕೋಡ್ನ ವಟ್ಟೋಳಿ ನಿವಾಸಿ ಕುಮಾರನ್ (77) ಹಾಗೂ ಕಣ್ಣೂರು ಪಾಲಕಂಡಿ ನಿವಾಸಿ ಅಬ್ದುಲ್ಲಾ (82) ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ.