ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಟೆಕ್ಕಿಗಳ ಮಾಹಿತಿಯನ್ನು ಅವರ ಕಂಪನಿಗಳಿಗೆ ರವಾನೆ ಮಾಡುವ ಹೊಸ ನಿಯಮವನ್ನು ಬೆಂಗಳೂರು ಸಂಚಾರ ವಿಭಾಗ ಪೊಲೀಸರು ಜಾರಿಗೆ ತಂದಿದ್ದಾರೆ.
ವೇಗವಾಗಿ ವಾಹನ ಚಾಲನೆ, ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಸೇರಿದಂತೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಅಂತಹ ಟೆಕ್ಕಿಗಳ ಕಂಪನಿಗಳಿಗೆ ಮಾಹಿತಿ ರವಾನಿಸಲಾಗುತ್ತದೆ. ಹೊಸ ನಿಯಮದ ಪ್ರಕಾರ ಯಾವುದೇ ಐಟಿ ಕಂಪನಿ ಉದ್ಯೋಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಮಾಹಿತಿಯನ್ನು ಅವರು ಕೆಲಸ ಮಾಡುವ ಕಂಪನಿಗಳಿಗೆ ಇ-ಮೇಲ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ. ವಾಹನ ಚಾಲನೆ ವೇಳೆ ಹೆಚ್ಚು ಜಾಗರೂಕರಾಗಿ ಹಾಗೂ ಜವಾಬ್ದಾರಿಯುತವಾಗಿರಬೇಕು ಎಂಬುದು ಈ ಯೋಜನೆ ಉದ್ದೇಶವಾಗಿದೆ.
ಐಟಿ ಕಂಪನಿಗಳು ಹೆಚ್ಚಿರುವ ಹೊರ ವರ್ತುಲ ರಸ್ತೆ, ವೈಟ್ ಫೀಲ್ಡ್ ಪ್ರದೇಶಗಳಲ್ಲಿ ಈಗಾಗಲೇ ಪೊಲೀಸರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಸುರಕ್ಷತಾ ಕ್ರಮ ನಿಟ್ಟಿನಲ್ಲಿ ಈ ನಿಯಮ ಜಾರಿಗೆ ತರಲಾಗಿದೆ.
ಪ್ರಸ್ತುತ ಬೆಂಗಳೂರು ಪೂರ್ವ ವಿಭಾಗಕ್ಕೆ ಈ ನಿಯಮ ಜಾರಿಗೊಳಿಸಲಾಗಿದ್ದು, ಈ ಭಾಗದಲ್ಲಿ ಯಶಸ್ವಿಯಾದರೆ ಬೆಂಗಳೂರಿನ ಇತರ ಭಾಗಗಳಿಗೂ ವಿಸ್ತರಿಸಲು ಪೊಲೀಸ್ ಇಲಾಖೆ ಮುಂದಾಗಿದೆ.