ಮುಂಬರುವ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕರಾಗಿ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಘೋಷಿಸಿದ ಬಳಿಕ ರೋಹಿತ್ ಶರ್ಮಾ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಫ್ರಾಂಚೈಸಿಯ ಈ ನಿರ್ಧಾರದಿಂದ ಬೇಸರಗೊಂಡ ಹಲವರು ಮುಂಬೈ ಇಂಡಿಯನ್ಸ್ ಇನ್ ಸ್ಟಾಗ್ರಾಂ ಖಾತೆಯಿಂದ ಅನ್ ಫಾಲೋ ಆಗಿದ್ದು ಹಲವರು ದೊಡ್ಡ ಮಟ್ಟದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಫ್ರಾಂಚೈಸಿಯ ನಿರ್ಧಾರಕ್ಕೆ ಬೇಸರಗೊಂಡ ಅಭಿಮಾನಿಯೊಬ್ಬರು ಮುಂಬೈ ಇಂಡಿಯನ್ಸ್ ನ ಕ್ಯಾಪ್ ಮತ್ತು ಜೆರ್ಸಿಯನ್ನು ಸುಟ್ಟುಹಾಕಿದ್ದಾರೆ.
ಡಿಸೆಂಬರ್ 15 ರಂದು ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ಹೊಸ ನಾಯಕನನ್ನಾಗಿ ಘೋಷಿಸಿತು. ಗುಜರಾತ್ ತಂಡದಿಂದ ಹಾರ್ದಿಕ್ ಪಾಂಡ್ಯರನ್ನು 15 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಮತ್ತೆ ಖರೀದಿಸಿದೆ. 2015 ರಿಂದ 2021 ರವರೆಗೆ ಹಾರ್ದಿಕ್ ಪಾಂಡ್ಯ ಮುಂಬೈ ತಂಡದಲ್ಲಿದ್ದರು.
ಮುಂಬೈ ಇಂಡಿಯನ್ಸ್ ನ ಗ್ಲೋಬಲ್ ಹೆಡ್ ಮಹೇಲಾ ಜಯವರ್ಧನೆ ಅವರು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಐಪಿಎಲ್ 2013 ರ ನಡುವೆ ಅಧಿಕಾರ ವಹಿಸಿಕೊಂಡ ನಂತರ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಗೆಲ್ಲಿಸಿ ಟ್ರೋಫಿ ಎತ್ತಿಹಿಡಿದಿದ್ದಾರೆ. ಇತ್ತೀಚೆಗೆ ರೋಹಿತ್ ಶರ್ಮಾ ನೇತೃತ್ವದಲ್ಲಿ ವಿಶ್ವಕಪ್ ಫೈನಲ್ ನಲ್ಲಿ ಸೋತ ನಂತರ ಅವರನ್ನು ಮುಂಬೈ ಇಂಡಿಯನ್ಸ್ ಟೀಂ ನಾಯಕರನ್ನಾಗಿ ಮುನ್ನಡೆಸುವ ಸಾಧ್ಯತೆಗಳಿಗೆ ಧಕ್ಕೆ ತಂದಿರಬಹುದು. ಐಪಿಎಲ್ 2024 ಮುಂದಿನ ವರ್ಷ ಮಾರ್ಚ್‌ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.