ಬೆಳಗಾವಿ : ರಾಜ್ಯ ಸರ್ಕಾರವು ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಶೀಘ್ರವೇ ವಿದ್ಯಾರ್ಥಿಗಳ ಭೋಜನಾ ವೆಚ್ಚವನ್ನು ಹೆಚ್ಚಳ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಪ್ರಸ್ತುತ ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆ ಅಧೀನದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳ ಭೋಜನಾ ವೆಚ್ಚವನ್ನು ಹೆಚ್ಚಿಸುವ ಪ್ರಸ್ತಾವವಿದೆ ಎಂದು ತಿಳಿಸಿದ್ದಾರೆ.
ವಸತಿ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಮಾಸಿಕ ರೂ.1450, ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಮಾಸಿಕ ರೂ.1650, ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಮಾಸಿಕ ರೂ. 1750, ಖಾಸಗಿ ಅನುದಾನಿತ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಮಾಸಿಕ ರೂ.1350 ಮತ್ತು ಖಾಸಗಿ ಅನುದಾನಿತ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಮಾಸಿಕ ರೂ.1450 ಭೋಜನಾ ವೆಚ್ಚ ನೀಡಲಾಗುತ್ತಿದೆ. ಅದನ್ನು ಹೆಚ್ಚಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.