ಬೆಳಗಾವಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸ್ವಪಕ್ಷದ ನಾಯಕರ ವಿರುದ್ಧದ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ.
ಬೆಳಗಾವಿ ವಿಧಾನಮಂಡಲ ಅಧಿವೇಶನ ಮುಗಿಯುವ ಹಂತಕ್ಕೆ ಬಂದಿದ್ದರೂ ವಿಧಾನಸಭೆಯ ಕಲಾಪದ ವೇಳೆಯೇ ಯತ್ನಾಳ್ ಬಿ.ವೈ.ವಿಜಯೇಂದ್ರ ಹಾಗೂ ಆರ್.ಅಶೋಕ್ ಅವರನ್ನು ಟೀಕಿಸಿದ ಪ್ರಸಂಗ ನಡೆದಿದೆ.
ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಿದ್ದ ಪೂರಕ ಬಜೆಟ್ ಅನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಯತ್ನಾಳ್, ಕಾಂಗ್ರೆಸ್ ನಾಯಕರು ಪ್ರತಿಯೊಂದು ವಿಷಯಕ್ಕೂ ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡುವುದು ಯಾಕೆ? ನಮ್ಮ ಪಕ್ಷದ ಜೋಡೆತ್ತುಗಳ ಬಗ್ಗೆ ಯಾಕೆ ಮಾತನಾಡಲ್ಲ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಮೂದಲಿಸಿದರು.
ಈ ವೇಳೆ ಎದ್ದು ನಿಂತ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದಿಂದ ಬಂದ ಅನುದಾನವನ್ನು ಎದೆತಟ್ಟಿಕೊಂಡು ಹೇಳ್ತೀರಿ. ಬಾರದ ಅನುದಾನವನ್ನು ನಾವು ಪ್ರಶ್ನಿಸಬಾರದೇ? ಎಂದು ಕೇಳಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ-ಗಲಾಟೆ ಆರಂಭವಾಯಿತು.