ಉಡುಪಿ: ದತ್ತು ಮಗಳು ನಾಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಕೆಲ ಸಮಯದಲ್ಲೇ ಖ್ಯಾತ ಕಲಾವಿದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಗ್ರಾಮದಲ್ಲಿ ನಡೆದಿದೆ.
ಖ್ಯಾತ ರಂಗಭೂಮಿ ಕಲಾವಿದರಾದ ರಂಗ ತರಂಗ ನಾಟಕ ಸಂಸ್ಥೆಯ ಸಂಸ್ಥಾಪಕ ಲೀಲಾಧರ ಶೆಟ್ಟಿ (68) ಹಾಗೂ ಪತ್ನಿ ವಸುಂಧರಾ ಶೆಟ್ಟಿ (59) ಆತ್ಮಹತ್ಯೆಗೆ ಶರಣಾದವರು.
ಲೀಲಾಧರ ಶೆಟ್ಟಿ ಹಾಗೂ ವಸುಂಧರಾ ಶೆಟ್ಟಿ ದಂಪತಿ 16 ವರ್ಷಗಳ ಹಿಂದೆ ಹೆಣ್ಣುಮಗುವನ್ನು ದತ್ತುಪಡೆದಿದ್ದರು. ಎರಡು ದಿನಗಳ ಹಿಂದೆ ದತ್ತು ಮಗಳು ನಾಪತ್ತೆಯಾಗಿದ್ದಳು. ಮಗಳು ನಾಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ದಂಪತಿ ತೀವ್ರವಾಗಿ ಮನನೊಂದಿದ್ದರು.
ಇದೀಗ ದಂಪತಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಲೀಲಾಧರ್ ದಂಪತಿಯ ಮಗಳು ಕಾಣೆಯಾಗಿರುವ ಬಗ್ಗೆ ಲೀಲಾಧರ್ ಸಂಬಂಧಿ ಮೋಹನ್ ಕುಮಾರ್ ಶೆಟ್ಟಿ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪಹರಣ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.