ನವದೆಹಲಿ: ಕೇಂದ್ರ ಸರ್ಕಾರ ಭಯೋತ್ಪಾದಕ ಕೃತ್ಯದ ಅರ್ಥವನ್ನು ಹೊಸದಾಗಿ ವ್ಯಾಖ್ಯಾನಿಸಿದೆ. ಅರ್ಥ ವ್ಯವಸ್ಥೆಗೆ ಅಪಾಯ ತಂದೊಡ್ಡುವ ಖೋಟಾ ನೋಟುಗಳ ಚಲಾವಣೆ ಮೊದಲಾದ ಅಪರಾಧ ಕೃತ್ಯಗಳನ್ನು ಇನ್ನು ಮುಂದೆ ಉಗ್ರ ಕೃತ್ಯ ಎಂದು ಪರಿಗಣಿಸಲು ನಿರ್ಧರಿಸಲಾಗಿದೆ.
ಬ್ರಿಟಿಷ್ ಕಾಲದ ಮೂರು ಕ್ರಿಮಿನಲ್ ಕಾನೂನುಗಳನ್ನು ಬದಲಿಸಿ ಮೂರು ಹೊಸ ಕಾನೂನುಗಳ ತಿದ್ದುಪಡಿ ವಿಧೇಯಕಗಳ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಲೋಕಸಭೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ವಿಧೇಯಕ ಮಂಡಿಸಲಾಗಿದ್ದು, ಇದರ ಸೆಕ್ಷನ್ 113ರ ಅನುಸಾರ ಭಾರತೀಯ ಕರೆನ್ಸಿಯ ಖೋಟಾ ನೋಟುಗಳನ್ನು ಮುದ್ರಿಸುವುದು, ಕಳ್ಳ ಸಾಗಣೆ ಮಾಡುವುದು ಮತ್ತು ಚಲಾವಣೆ ಮಾಡುವುದನ್ನು ಭಯೋತ್ಪಾದನಾ ಕೃತ್ಯ ಎಂದು ಪರಿಗಣಿಸಲಾಗಿದೆ. ದೇಶದ ಆರ್ಥಿಕ ಪರಿಸ್ಥಿತಿಗೆ ಹಾನಿ ತರುವ ಕಾರಣಕ್ಕೆ ಇಂತಹ ದಂಧೆಯನ್ನು ಉಗ್ರ ಕೃತ್ಯವೆಂದು ವ್ಯಾಖ್ಯಾನಿಸಲಾಗಿದೆ.