ಬೆಂಗಳೂರು: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(ಕೆ.ಎಸ್.ಎ.ಟಿ.) ವಿಡಿಯೋ ಕಾನ್ಫರೆನ್ಸ್ ಕಲಾಪದ ವೇಳೆ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ ಘಟನೆ ನಡೆದಿದೆ.
ಶನಿವಾರ ಕೆಎಟಿ ವಿಡಿಯೋ ಕಾನ್ಫರೆನ್ಸ್ ನಡೆಯುತ್ತಿದ್ದಾಗ ಅಪರಿಚಿತರು ಅಶ್ಲೀಲ ವಿಡಿಯೋ ಮತ್ತು ಫೋಟೋ ಅಪ್ಲೋಡ್ ಮಾಡಿದ್ದು, ಮಂಡಳಿಯ ನ್ಯಾಯಾಂಗ ಅಧಿಕಾರಿ ವಿನೀತಾ ಪಿ. ಶೆಟ್ಟಿ ಅವರು ಸೆಂಟ್ರಲ್ ವಿಭಾಗದ ಸೈಬರ್ ಅಪರಾಧ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಡು ತನಿಖೆ ನಡೆಸಿದ್ದಾರೆ. ತಾತ್ಕಾಲಿಕವಾಗಿ ವಿಡಿಯೋ ಕಾನ್ಫರೆನ್ಸ್ ಕಲಾಪ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ. ವಕೀಲರು ಭೌತಿಕವಾಗಿ ಕೆಎಟಿ ಕಲಾಪಕ್ಕೆ ಹಾಜರಾಗಬೇಕಿದೆ. ಇತ್ತೀಚೆಗಷ್ಟೇ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ವೇಳೆಯಲ್ಲೂ ಇದೇ ರೀತಿ ಘಟನೆ ನಡೆದಿತ್ತು.