ಬೆಳಗಾವಿ(ಸುವರ್ಣಸೌಧ): ಗುಣಮಟ್ಟದ ಆಹಾರಧಾನ್ಯ ಸಂಗ್ರಹಿಸಿ ಪಡಿತರ ಚೀಟಿದಾರರಿಗೆ ವಿತರಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಸೋಮವಾರ ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಡಿ.ಎಸ್. ಅರುಣ್, ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಬದಲಿಗೆ ಮೂರು ಕೆಜಿ ಅಕ್ಕಿ, ಎರಡು ಕೆಜಿ ರಾಗಿ ನೀಡಲಾಗುತ್ತಿದೆ. ಗುಣಮಟ್ಟದ ರಾಗಿ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸಚಿವರು ಪ್ರತಿಕ್ರಿಯೆ ನೀಡಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಗಿ ದಾಸ್ತಾನು ವೇಳೆ ಭಾರಿ ಅವ್ಯವಹಾರ ನಡೆದು ಕಳಪೆ ಗುಣಮಟ್ಟದ ರಾಗಿ ದಾಸ್ತಾನು ಮಾಡಲಾಗಿತ್ತು. ಈಗ ನಾವು ಗುಣಮಟ್ಟದ ಆಹಾರ ಧಾನ್ಯ ಸಂಗ್ರಹಿಸಿ ವಿತರಿಸುತಿದ್ದೇವೆ ಎಂದು ತಿಳಿಸಿದ್ದಾರೆ.
ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಡಿತರ ದಾಸ್ತಾನು ಗೋದಾಮುಗಳಲ್ಲಿ ಪ್ರತಿ ವಾರಕ್ಕೆ ಒಮ್ಮೆ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ಪಡಿತರ ಅಕ್ರಮ, ಕಳ್ಳ ಸಾಗಣೆ ತಡೆಗೆ ರಾಜ್ಯಮಟ್ಟದ ಟಾಸ್ಕ್ ಫೋರ್ಸ್ ರಚಿಸಲು ಪರಿಶೀಲನೆ ನಡೆದಿದೆ ಎಂದು ಹೇಳಿದ್ದಾರೆ.