
ಜೈಪುರ್: ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೇಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.
ಲೇಡಿ ಡಾನ್ ಪೂಜಾ ಸೈನಿ ಬಂಧಿತ ಮಹಿಳೆ. ಜೈಪುರದಲ್ಲಿ ಆಕೆಯನ್ನು ಬಂಧಿಸಲಾಗಿದೆ. ರಾಜಸ್ಥಾನದಲ್ಲಿ ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್ ಮತ್ತು ರೋಹಿತ್ ಗೋಡಾರಾ ಅವರ ವ್ಯವಹಾರಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಪೂಜಾ ಸೈನಿ ಹೊತ್ತಿದ್ದರು.
ಘಟನೆಗೆ ಮುನ್ನ ಆಯುಧಗಳನ್ನು ಒದಗಿಸುವುದು ಮತ್ತು ಹಣಕಾಸಿನ ನೆರವು ನೀಡುವುದು ಪೂಜಾ ಪಾತ್ರವನ್ನು ಒಳಗೊಂಡಿತ್ತು. ಘಟನೆಯ ನಂತರ ಶಸ್ತ್ರಾಸ್ತ್ರಗಳನ್ನು ಹಿಂಪಡೆಯುವ ಜವಾಬ್ದಾರಿಯನ್ನು ಅವಳು ಹೊಂದಿದ್ದಳು. ಆಕೆ ಜೈಪುರದಲ್ಲಿ ನಕಲಿ ಗುರುತಿನಡಿ ಯುವಕನೊಂದಿಗೆ ನೆಲೆಸಿದ್ದಳು. ಪೊಲೀಸರು ಪೂಜಾ ಅವರಿಂದ ಅನೇಕ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದು, ಪೊಲೀಸ್ ತಂಡ ಪ್ರಸ್ತುತ ಅವಳ ವಿಚಾರಣೆ ನಡೆಸುತ್ತಿದೆ.
ಪ್ರಮುಖ ಆರೋಪಿಗಳಾದ ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿ ಅವರನ್ನು ಚಂಡೀಗಢದಲ್ಲಿ ಬಂಧಿಸಲಾಗಿದೆ.