ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ(KSMSCL) ಔಷಧಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿಲ್ಲ.
ಹೀಗಾಗಿ ಕ್ಯಾನ್ಸರ್, ಹೃದಯಾಘಾತ, ಹಾವು ಕಡಿತ, ನಾಯಿ ಕಡಿತ ಮೊದಲಾದ ಜೀವ ರಕ್ಷಕ ಔಷಧ ಸಿಗದೆ ಬಡ ರೋಗಿಗಳು ಪರದಾಡುವಂತಾಗಿದೆ. ಔಷಧ ಪೂರೈಕೆಗಾಗಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ವೈದ್ಯರು ಬರೆದುಕೊಡುವ ಔಷಧಗಳನ್ನು ಹೊರಗೆ ದುಬಾರಿ ಬೆಲೆ ನೀಡಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ.
ನಿಗಮದಿಂದ ಪ್ರತಿವರ್ಷ ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲುಕೋಸ್ ಬಾಟಲ್, ಆಂಟಿಬಯೋಟೆಕ್ ಮಾತ್ರೆ, ವೈದ್ಯಕೀಯ ಸಲಕರಣೆ, ಬ್ಯಾಂಡೇಜ್ ಬಟ್ಟೆ ಸೇರಿದಂತೆ ನಾನಾ ರೀತಿಯ ವೈದ್ಯಕೀಯ ಸಲಕರಣೆ, ಔಷಧಗಳನ್ನು ಖರೀದಿಸಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ಪೂರೈಸಲಾಗುತ್ತದೆ.
ಆದರೆ, ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಕಂಡು ಬಂದಿದೆ. ರಕ್ತಹೀನತೆ, ನ್ಯುಮೋನಿಯಾ, ಕ್ಯಾನ್ಸರ್, ಅಸ್ತಮಾ, ಸಕ್ಕರೆ ಕಾಯಿಲೆ, ಬಿಪಿ, ಗರ್ಭಕೋಶ ರಕ್ತಸ್ರಾವ, ಹೃದಯ ಶಸ್ತ್ರಚಿಕಿತ್ಸೆ ಸೇರಿ ವಿವಿಧ ಗಂಭೀರ ಕಾಯಿಲೆಗಳನ್ನು ನಿವಾರಿಸುವ ಔಷಧಗಳ ಕೊರತೆ ಉಂಟಾಗಿದೆ.