ಕೊಪ್ಪಳ: ತಂದೆ ಹಾಗೂ ಹೈಕಮಾಂಡ್ ನಿರ್ಧರಿಸಿದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ಧರ್ಮಗುರುಗಳ ಕಾರ್ಯಕ್ರಮದಲ್ಲಿ ಮೌಲ್ವಿಗಳ ಪಕ್ಕದಲ್ಲಿ ಕುಳಿತುಕೊಂಡಿದ್ದನ್ನು ಉಗ್ರವಾದಿಗಳಿಗೆ ಹೋಲಿಸುವುದು ಸರಿಯಲ್ಲ. ಕನ್ನಡ ನಾಡು ಶಾಂತಿ, ಸೌಹಾರ್ದತೆ, ಜಾತ್ಯಾತೀತತೆಗೆ ಹೆಸರಾಗಿದೆ. ಬಿಜೆಪಿ ಶಾಸಕ ಯತ್ನಾಳ್ ಸೇರಿದಂತೆ ಆ ಪಕ್ಷದ ಮುಖಂಡರಿಂದ ಜಾತಿ ಧರ್ಮ ಸಹಿಷ್ಣುತೆ ನಿರೀಕ್ಷಿಸುವುದು ಅಸಾಧ್ಯ ಎಂದು ಹೇಳಿದ್ದಾರೆ.
ಅಪ್ಪ ಹಾಗೂ ಪಕ್ಷದ ಹೈಕಮಾಂಡ್ ನಿರ್ಧರಿಸಿದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧವಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.