ಬೆಂಗಳೂರು : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ಆದೇಶದ ಮೇರೆಗೆ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಇಂದು ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ “ರಾಷ್ಟ್ರೀಯ ಲೋಕ ಅದಾಲತ್” ಆಯೋಜಿಸಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಲಾಗಿದ್ದು, ಡಿ.09 ರ ಶನಿವಾರದಂದು ಜರುಗುವ ಲೋಕಅದಾಲತ್‍ದಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಸಿವಿಲ್ ವ್ಯಾಜ್ಯ, ಮೋಟಾರ್ ವಾಹನ ಅಪಘಾತ ಪರಿಹಾರದ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ವಿದ್ಯುತ್ ಮಂಡಳಿ ಸಂಬಂಧಿತ ಪ್ರಕರಣಗಳು, ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರುದ್ಧ ದಾಖಲಾದ ಪ್ರಕರಣಗಳು, ಬ್ಯಾಂಕ್, ಸಹಕಾರಿ ಸಂಘ, ಖಾಸಗಿ ವ್ಯಕ್ತಿಗಳ ನಡುವಿನ ಚೆಕ್ ಅಮಾನ್ಯ, ಹಣ ವಸೂಲಾತಿ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳು, ವೈವಾಹಿಕ ಪ್ರಕರಣಗಳು (ವಿವಾಹ ವಿಚ್ಛೇದನ ಹೊರತು ಪಡಿಸಿ), ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಕಾರ್ಮಿಕ ನಷ್ಟ ಪರಿಹಾರ ಪ್ರಕರಣಗಳು, ಕಾನೂನಿನಲ್ಲಿ ರಾಜಿ ಆಗಬಹುದಾದ ಎಲ್ಲಾ ತರಹದ ಕ್ರಿಮಿನಲ್ ಪ್ರಕರಣಗಳನ್ನು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಮೂರ್ತಿಗಳ ಆಶಯದಂತೆ ಲೋಕ-ಆದಾಲತ್ ಮುಖಾಂತರ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾರ್ವಜನಿಕರು ವಿಶೇಷವಾಗಿ ಕಕ್ಷಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಲೋಕ ಅದಾಲತ್‍ನ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ.