ದಸರಾ ಆನೆ ಅರ್ಜುನ ಪ್ರಾಣ ಬಿಟ್ಟಿದ್ದ ಜಾಗ ಹಾಗೂ ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಡಿಸೆಂಬರ್ 1 ರಂದು ಕಾಡಾನೆಯನ್ನು ಸೆರೆಹಿಡಿಯಲು ನಡೆಸಿದ ಕಾರ್ಯಾಚರಣೆಯಲ್ಲಿ ಸಾವಿಗೀಡಾದ 63 ವರ್ಷದ ಆನೆ ಅರ್ಜುನ ಆನೆಯ ಸ್ಮಾರಕವನ್ನು ಹಾಸನ ಮತ್ತು ಮೈಸೂರು ಜಿಲ್ಲೆಯಲ್ಲಿ ನಿರ್ಮಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದರು.
ಇದೀಗ ಸಿಎಂ ಸಿದ್ಧರಾಮಯ್ಯ 8 ಬಾರಿ ದಸರಾ ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಪ್ರಾಣ ಕಳೆದುಕೊಂಡ ಸ್ಥಳದಲ್ಲಿಯೇ ಸ್ಮಾರಕ ನಿರ್ಮಿಸಲಾಗುವುದು ಹಾಗೂ ಹೆಚ್.ಡಿ ಕೋಟೆಯಲ್ಲೂ ಸ್ಮಾರಕ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
ಅರ್ಜುನ ಪ್ರಾಣಬಿಟ್ಟಿದ್ದ ಸಕಲೇಶಪುರದ ಅರಣ್ಯದಲ್ಲಿಯೇ ಸ್ಮಾರಕ ನಿರ್ಮಿಸಲು ಹೇಳಿದ್ದು, ಮೈಸೂರಿನ ಎಚ್.ಡಿ. ಕೋಟೆಯಲ್ಲಿಯೂ ಸ್ಮಾರಕ ನಿರ್ಮಿಸಲು ನಿರ್ದೇಶನ ನೀಡಿದ್ದೇವೆ’ ಎಂದು ಸಿಎಂ ಪುನರುಚ್ಚರಿಸಿದರು.
ಮೈಸೂರು ದಸರಾ ಉತ್ಸವದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಸರು ಬಳಿಯ ಅರಣ್ಯದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ಸಿಲುಕಿ ಮೃತಪಟ್ಟಿತು. ಕಳೆದ ಮಂಗಳವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅರ್ಜುನ ಆನೆ ನಿಧನಕ್ಕೆ ನಾಡಿನ ಜನ ಕಂಬನಿ ಮಿಡಿದಿದ್ದಾರೆ. ಮೈಸೂರಿನಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಆನೆ ಅರ್ಜುನನ ಅಂತ್ಯಕ್ರಿಯೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದಲ್ಲಿ ನೆರವೇರಿದೆ.
ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ.
ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಯ ವೇಳೆ ದುರ್ಘಟನೆ ಸಂಭವಿಸಿದ್ದು, ಮದಗಜವೊಂದು, ಅರ್ಜುನನ ಮೇಲೆ ದಾಳಿ ಮಾಡಿ, ತನ್ನ ದಂತದಿಂದ ಚುಚ್ಚಿ ಘಾಸಿಗೊಳಿಸಿ, ಸಾವಿಗೆ ಕಾರಣವಾಗಿರುವುದು ಅತ್ಯಂತ ದುರಾದೃಷ್ಟಕರ.